Districts

ಕಾವೇರಿ ನೀರಿಗಾಗಿ ದಂಡಿ ಸತ್ಯಾಗ್ರಹದ ಹೋರಾಟ- ಡಿಕೆಶಿ

ಹಾಸನ: ಕಾವೇರಿ ನೀರಿಗಾಗಿ ಗಾಂಧೀಜಿ ಅವರ ದಂಡಿ ಸತ್ಯಾಗ್ರಹದ ರೀತಿ ಈ ಹೋರಾಟ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದ ಆರ್ ಸಿ ರಸ್ತೆಯಲ್ಲಿರುವ ವೆಸ್ಲಿ ಚರ್ಚ್‍ಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರರವರ ಧರ್ಮ ಅವರು ಉಳಿಸಿಕೊಳ್ಳಬೇಕು. ಇದು ಮೂಲಭೂತವಾಗಿ ನಮಗೆ ಸಂವಿಧಾನದಲ್ಲಿ ಬಂದ ಹಕ್ಕು. ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿ ವಿಶ್ವಾಸದಿಂದ ಬದುಕಲು ಎಲ್ಲ ಧರ್ಮದಲ್ಲೂ ಅವಕಾಶ ಕೊಟ್ಟಿದೆ ಎಂದರು.
ಇನ್ನು ಮೇಕೆದಾಟು ಯೋಜನೆ ಹೋರಾಟವನ್ನು ಡಿಕೆಶಿ ಹೈಜಾಕ್ ಮಾಡಿದ್ದಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಬಹಳ ದೊಡ್ಡವರು. ಕುಮಾರಸ್ವಾಮಿ ಯಾವಾಗ ಹೋರಾಟ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಹೋರಾಟ ಮಾಡಿದ ನಂತರ ಹೋರಾಟ ಮಾಡುವುದು ಅವರ ಮನಸ್ಸಿನಲ್ಲಿತ್ತು ಅಂತ ಅಧಿವೇಶನದಲ್ಲಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.ವಿಧಾನ ಪರಿಷತ್‍ನಲ್ಲಿ ನಡೆದ ಗಲಾಟೆ ಬಗ್ಗೆ ಸ್ಪೀಕರ್ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರ ಬಗ್ಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ರಾಜಕೀಯಕ್ಕೋಸ್ಕರ ಏನು ಮಾಡಿದರು ಸ್ವಾಗತಿಸುತ್ತಿಸುತ್ತೇವೆ ಎಂದರು ಮತ್ತು ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತಂತೆ, ಇನ್ನೂ ನಮಗೆ ಯಾವುದೇ ಅರ್ಜಿ ಬಂದಿಲ್ಲ. ಅರ್ಜಿ ಬಂದರೆ ಅಲ್ಲಂ ವೀರಭದ್ರಪ್ಪ ಸಮಿತಿಗೆ ಹೋಗುತ್ತದೆ. ಅವರ ಮಗನಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ನಾವೇ ಅವರನ್ನು ಮಂತ್ರಿ ಮಾಡಿದ್ದೇವೆ, ಎ.ಮಂಜು ನನ್ನ ಒಳ್ಳೆಯ ಸ್ನೇಹಿತ, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಇನ್ನು ಸಿಎಂ ಬದಲಾವಣೆ ವಿಚಾರ ಅವರ ಪಾರ್ಟಿಯವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.
ರೈತರಿಗೆ ನ್ಯಾಯಯುತವಾದ ನೀರು ಸಿಗಬೇಕು, ಬೆಂಗಳೂರಿಗೆ ನಿಗದಿತ ನೀರು ಪೂರೈಕೆಯಾಗಬೇಕು. ನಮ್ಮ ನೀರು ನಮ್ಮ ಹಕ್ಕು, ಕಾವೇರಿ ನಮ್ಮದು. ತಮಿಳುನಾಡಿಗೆ ಏನು ಶೇರ್ ಹೋಗಬೇಕು ಅದಕ್ಕೆ ನಮ್ಮ ತಕರಾರಿಲ್ಲ. ಇಲ್ಲಿನ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಸರ್ಕಾರ ಸಭೆ ನಡೆಸಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಮಾಡಲಿಲ್ಲ. ಹೀಗಾಗಿ ಪಕ್ಷಭೇದ ಮರೆತು ಜನವರಿ 9 ರಿಂದ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದ್ದೇವೆ. ರೈತ ಸಂಘಟನೆಗಳು, ಕಲಾವಿದರಿಗೆ, ಚಿತ್ರರಂಗದ ಎಲ್ಲಾ ಸ್ನೇಹಿತರಿಗೂ ಆಹ್ವಾನ ನೀಡಿದ್ದೇವೆ. ನೆಲ-ಜಲ ವಿಚಾರದಲ್ಲಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡಬೇಕು. ಈ ಹೋರಾಟ ಇತಿಹಾಸದ ಪುಟ ಸೇರಬೇಕು. ಗಾಂಧೀಜಿ ಅವರ ದಂಡಿ ಸತ್ಯಾಗ್ರಹದ ರೀತಿ ಈ ಹೋರಾಟ ಮಾಡುತ್ತಿದ್ದೇನೆ. ಒಂದು ದಿನ 18 ರಿಂದ 20 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದೇನೆ ಎಂದರು.

Share Post