DistrictsPolitics

ಬಿಜೆಪಿ ಸೇರಲ್ಲ, ಕೆಆರ್‌ಪಿಪಿ ಪಕ್ಷದಿಂದ 5 ಕ್ಷೇತ್ರಗಳಲ್ಲಿ ಸ್ಪರ್ಧೆ; ಜನಾರ್ದನರೆಡ್ಡಿ ಸ್ಪಷ್ಟ ನುಡಿ!

ಕೊಪ್ಪಳ; ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನರೆಡ್ಡಿ ನೇತೃತ್ವದ ಪಕ್ಷ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿದೆ. ಆದ್ರೆ, ನಾಲ್ಕೈದು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಕಾರಣವಾಗಿದೆ. ಇದೀಗ ಮತ್ತೆ ಕೆಆರ್‌ಪಿಪಿ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸೋದಾಗಿ ಹೇಳುತ್ತಿದೆ. ಸ್ವತಃ ಜನಾರ್ದನರೆಡ್ಡಿಯವರೇ ಈ ವಿಚಾರವನ್ನು ಹೇಳಿದ್ದಾರೆ.

ಜನಾರ್ದನರೆಡ್ಡಿಯವರು ಬಿಜೆಪಿ ಸೇರಲಿದ್ದಾರೆ. ಶ್ರೀರಾಮುಲು ಮೂಲಕ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ರೀತಿಯಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಜನಾರ್ದನರೆಡ್ಡಿಯವರು, ನಾನು ಶ್ರೀರಾಮುಲು ಅವರು ಮಾತನಾಡಿ ಒಂದು ವರ್ಷವಾಗಿದೆ. ವೈಯಕ್ತಿಕವಾಗಿಯಾದರೂ, ರಾಜಕೀಯವಾಗಿಯಾದರೂ ನನಗೂ ಅವರಿಗೂ ಯಾವುದೇ ಸಂಬಂಧಗಳು ಈಗಿಲ್ಲ. ಹೀಗಿರುವಾಗ ನಾನು ಹೇಗೆ ಅವರ ಮೂಲಕ ಬಿಜೆಪಿ ಸೇರುವ ಪ್ರಯತ್ನ ಮಾಡುತ್ತೇನೆ ಎಂದು ಜನಾರ್ದನರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ನಾನು ಮೊದಲೇ ಹೇಳಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಬಡವರು ಹಾಗೂ ಹಿಂದುಳಿದ ಪ್ರದೇಶದ ಜನರ ಪರವಾಗಿ ಹೋರಾಟ ಮಾಡಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಜೊತೆ ನನ್ನ ಸಂಬಂಧಗಳು ಮುಗಿದುಹೋದ ಅಧ್ಯಾಯ. ಇದು ನನ್ನ ಸ್ಪಷ್ಟ ನಿಲುವು ಎಂದು ಜನಾರ್ದನರೆಡ್ಡಿ ಹೇಳಿದ್ದಾರೆ.

 

Share Post