ಟೊಮ್ಯಾಟೋಗೆ ಚಿನ್ನದ ಬೆಲೆ; ತೋಟದಲ್ಲಿ ಲಕ್ಷಾಂತರ ಮೌಲ್ಯದ ಟೊಮ್ಯಾಟೋ ಕಳವು..!
ಹಾಸನ; ತರಕಾರಿ ರೇಟು ತುಂಬಾನೇ ಜಾಸ್ತಿಯಾಗಿದೆ. ಅದರಲ್ಲೂ ಎಲ್ಲರೂ ಅಡುಗೆಯಲ್ಲಿ ಉಪಯೋಗಿಸುವ ಟೊಮ್ಯಾಟೋ ಬೆಲೆ ಕೆಜಿಗೆ ಶತಕ ದಾಟಿದೆ. ಈ ನಡುವೆ ಟೊಮ್ಯಾಟೋ ಬೆಳೆದವರು, ಬೆಳೆಯನ್ನು ಉಳಿಸಿಕೊಳ್ಳಲು ಸೆಕ್ಯೂರಿಟಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಯಾಕಂದ್ರೆ, ರಾತ್ರಿ ವೇಳೆ ಟೊಮ್ಯಾಟೋ ತೋಟಕ್ಕೆ ನುಗ್ಗಿ ಟೊಮ್ಯಾಟೋ ಕಳವು ಮಾಡುವ ಪ್ರಕರಣಗಳು ನಡೆಯುತ್ತಿವೆ.
ದೇಶದೆಲ್ಲೆಡೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಈ ನಡುವೆ ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೋ ಕಳ್ಳತನ ಮಾಡಿರುವ ಪ್ರಸಂಗ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಧರಣಿ ಎಂಬುವವರಿಗೆ ಸೇರಿದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋವನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಕಳೆದ ರಾತ್ರಿ ದುಷ್ಕರ್ಮಿಗಳು ಜಮೀನಿಗೆ ನುಗ್ಗಿದ್ದಾರೆ. ತೋಟದಲ್ಲಿ 50 ರಿಂದ 60 ಬ್ಯಾಗ್‌ನಷ್ಟು ಟೊಮೆಟೋ ಕೊಯ್ದಿಕೊಂಡು ಹೋಗಿದ್ದಾರೆ. ಈಗಿನ ಬೆಲೆಯಂತೆ ಇದರ ಬೆಲೆ ಅಂದಾಜು ಒಂದೂವರೆ ಲಕ್ಷ ರೂಪಾಯಿ ಆಗುತ್ತದೆ ಎಂದು ಟೊಮ್ಯಾಟೋ ಬೆಳೆದ ರೈತರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.