ಮಂಗಳೂರು ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; ಐವರು ಕಾರ್ಮಿಕರ ದುರ್ಮರಣ
ಮಂಗಳೂರು: ಮಂಗಳೂರಿನ ವಿಶೇಷ ಆರ್ತಿಕ ವಲಯದಲ್ಲಿರುವ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ರಾತ್ರಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮೃತರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ. ನಿಜಾಮುದ್ದಿನ್ ಸಾಬ್, ಸಮೀರುಲ್ಲಾ, ಉಮರ್ ಫಾರುಕ್ ಸೇರಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿಯಲ್ಲಿ ಬಹುತೇಕ ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರೇ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ನ್ನು ಶುಚಿಗೊಳಿಸುತ್ತಿದ್ದ. ಈ ವೇಳೆ ಆತ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾನೆ. ಅದನ್ನು ನೋಡಿದ ಇತರ ಕಾರ್ಮಿಕರು ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆಗ ಅವರೂ ವಿಷಾನಿಲದಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಐವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.