CrimeDistricts

ಶಿವಮೊಗ್ಗ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ; ಅಂಗಡ-ಮುಂಗಟ್ಟು ಬಂದ್‌

ಶಿವಮೊಗ್ಗ; ಶಿವಮೊಗ್ಗದಲ್ಲಿ ನಿನ್ನೆ ನಡೆದ ಗಲಾಟೆ ಹಾಗೂ ಇಂದು ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣದ ನಂತರ ಶಿವಮೊಗ್ಗ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಮಳಿಗೆಗಳು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಲಾಗಿದೆ.

ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರಮುಖ ವೃತ್ತಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಲಾಗಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಎಲ್ಲೆಡೆ ತೀವ್ರ ತಪಾಸಣೆಗಳು ನಡೆಯುತ್ತಿವೆ. ಅನುಮಾನಾಸ್ಪದವಾಗಿ ಓಡಾಡುವವರನ್ನು ತಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಭದ್ರಾವತಿಯಲ್ಲಿ ಇಂದು ಬೆಳಗ್ಗೆ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದ ಗುಂಪಿನಲ್ಲಿ ಪ್ರಮುಖನಾಗಿದ್ದ ಆರೋಪಿ ಮುಬಾರಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post