ಸರ್ಕಾರಿ ಹಣದಲ್ಲಿ ಪ್ರಧಾನಿ ಮತ ಪ್ರಚಾರ ; ಖರ್ಗೆ ವಾಗ್ದಾಳಿ
ಕಲಬುರಗಿ: ಆಡಳಿತಕ್ಕಾಗಿ ಬಳಸಬೇಕಾದ ಹಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕೆ ಬಳಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಸರ್ಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದು, ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಸರ್ಕಾರದ ದುಡ್ಡಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಈ ಹಿಂದೆ ಎಂದೂ ಇಷ್ಟೊಂದು ದಿನ ಸರ್ಕಾರಿ ಕಾರ್ಯಕ್ರಮವನ್ನು ನಡೆಸಿದ ಉದಾಹರಣೆ ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಕಾರ್ಯಕ್ರಮಗಳ ಹೆಸರಲ್ಲಿ ಮತಯಾಚನೆಗೆ ಮುಂದಾಗಿದ್ದಾರೆ. ಇದು ಸರಿಯಲ್ಲ. ಪ್ರಚಾರ ಮಾಡುವುದಿದ್ದರೆ ಪಕ್ಷದಿಂದ ಮಾಡಿ. ಈ ರೀತಿಯಾಗಿ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡುವುದು ಸರಿಯಲ್ಲ ಎಂದು ಖರ್ಗೆ ಹೇಳಿದ್ದಾರೆ.