ಪಿಎಸ್‌ಐ ನೇಮಕಾತಿ ಅಕ್ರಮ; ಬಿಜೆಪಿ ನಾಯಕಿ ಬಂಧನಕ್ಕೆ ಮೀನಾಮೇಷ ಯಾಕೆ..? – ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ದಿವ್ಯಾ ಅವರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಅಕ್ರಮದಲ್ಲಿ ಭಾಗಿಯಾದ ಬೇರೆ ಪಕ್ಷಗಳ ಮುಖಂಡರನ್ನು 24 ಗಂಟೆಗಳಲ್ಲಿ ಬಂಧಿಸುತ್ತೀರಿ, ನಿಮ್ಮ ಪಕ್ಷದವರನ್ನು ಹತ್ತಾರು ದಿನ ಕಳೆದರೂ ಬಂಧಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್, ಬಿಜೆಪಿ ಅಷ್ಟೇ ಅಲ್ಲ, ಬೇಕಾದರೂ ನನ್ನ ಮನೆಯಲ್ಲಿಯೂ ತನಿಖೆ ನಡೆಯಲಿ. ಸಿಐಡಿಯವರು ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮಾಡಬೇಕು. ಅಕ್ರಮ ನಿಲ್ಲಿಸಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಈ ರೀತಿಯ ಅಕ್ರಮದಿಂದ ಈ ಭಾಗದ ಮುಂದಿನ ಪೀಳಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಳ್ಳೆಯ ಆಡಳಿತ ನೀಡಿದರೆ, ಅಭಿವೃದ್ಧಿಯಾಗುತ್ತದೆ. ದಕ್ಷ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ನಿಲ್ಲಿಸಲು ನಾನು ಸಂದರ್ಶನ ಸಮಯದಲ್ಲಿ ಒಂದೇ ಅಂಕ ನೀಡುವ ನಿಯಮವನ್ನು ಜಾರಿಗೆ ತಂದಿದ್ದೆ. ಏಳು ಜನರು ಏಳು ಅಂಕಗಳನ್ನು ನೀಡಲು ಮಾತ್ರ ಹೇಳಲಾಗಿತ್ತು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಯಲು ನಿಯಮ ರೂಪಿಸಲಾಗಿತ್ತು. ಆಗ ಅದು ತುಂಬಾ ಯಶಸ್ವಿಯಾಗಿತ್ತು ಎಂದು ಹಳೇ ಸಂದರ್ಶನ ವಿಧಾನವನ್ನು ನೆನಪಿಸಿಕೊಂಡರು.