Districts

Hijab row: ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದ ಖಚಿತ: HDK

ಹಾಸನ: ಭುಗಿಲೆದ್ದಿರುವ ಹಿಜಾಬ್‌ ವಿವಾದದ ಕುರಿತು ಹಾಸನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, “ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ಮಾಡಿದ್ದಾರೆ. ಇದರಲ್ಲಿ ಎಲ್ಲಾ ಸಮಾಜದ ಸಂಘಟನೆಗಳ ಪಾತ್ರವೂ ಇದೆ. ಇದು ವ್ಯವಸ್ಥಿತವಾಗಿ ಶುರುವಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಇದೆ. ಅದಕ್ಕೆ ಈ ವಿಷಯವನ್ನು ದೇಶವ್ಯಾಪಿ ಹರಡುವಂತೆ ಮಾಡಲಾಗುತ್ತಿದೆ. ಜನ ಇಂತಹ ಭಾವನಾತ್ಮಕ ವಿಷಯಗಳಿಗೆ ಬಲಿಯಾಗದಂತೆ ಮನವಿ ಮಾಡಿಕೊಂಡಿದ್ದಾರೆ.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ನಮಗೆಲ್ಲರಿಗೂ ಬೇಕಿರುವುದು ಬದುಕು ಮಾತ್ರ. ಬದುಕು ಕಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಮಾಜವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದು ಅವರು ಪ್ರತಿಪಾದಿಸಿದರು.

ಮತಗಳಿಗಾಗಿ ಹುನ್ನಾರ

ಹಿಜಾಬ್ ವಿವಾದವನ್ನು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಭಾವನಾತ್ಮಕ ವಿಚಾರವನ್ನು ಮತಗಳಾಗಿ ಪರಿವರ್ತನೆ ಮಾಡಬಹುದು ಎನ್ನುವ ದುರಾಲೋಚನೆ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಎಲ್ಲಾ ದುಷ್ಟ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವ ಕ್ಷಣದಲ್ಲಾದ್ರೂ ಇದು ಅವರಿಗೇ ತಿರಗುಬಾಣ ಆಗುವುದು ಖಚಿತ ಎಂದು  ಮಾರ್ಮಿಕವಾಗಿ ಮಾತನಾಡಿದ್ದಾರೆ.

ಪೋಷಕರು ಈ ಬಗ್ಗೆ ಎಚ್ಚರ ವಹಿಸಿ, ನಿಮ್ಮ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಯಾವುದೇ ಸಂಘಟನೆಗೆಳಿಗೆ ಅವಕಾಶ ಕೊಡಬೇಡಿ. ನಿಮ್ಮ ಮಕ್ಕಳನ್ನು ಅಂತಿಮವಾಗಿ ದಾರಿ ತಪ್ಪಿಸುತ್ತಿದ್ದಾರೆ. ಆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ನೈಜ ವಾತಾವರಣ ಏನಿದೆ ಎಂಬ ಬಗ್ಗೆ ಮಕ್ಕಳಿಗೆ ಬುದ್ದಿ ಹೇಳಿ. ಚಿಕ್ಕ ಮಕ್ಕಳಲ್ಲಿ ದ್ವೇಷದ ಮನೋಭಾವನೆ ಬೆಳೆಸುವಂಥ ಕೆಲಸ ಬೇಡ. ಸಮಾಜವನ್ನು ದಾರಿ ತಪ್ಪಿಸುವಂತಹ ಸಂಘಟನೆಗಳಿಗೆ ಯಾರೂ ಬಲಿಯಾಗುವುದು ಬೇಡ ಎಂಬ ಕಿವಿಮಾತನ್ನು ಹೇಳಿದ್ರು.

ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ಆಗುತ್ತಿಲ್ಲ:

ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿ ಬಾರಿಯೂ ಅನಗತ್ಯ ವಿಷಯಗಳ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಕಲಾಪಗಳಲ್ಲಿ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿಲ್ಲ. ಪ್ರತಿ ಬಾರಿಯೂ ಸದನದ ಸಮಯ ಬೇಡದ ವಿಚಾರಗಳಿಗೆ ಬಲಿಯಾಗುತ್ತಿದೆ.

Share Post