CrimeDistricts

ಮಠದ ಆನೆ ಮೇಲೆ ಕಣ್ಣಾಕಿದ ಖದೀಮರು: ದೂರು ದಾಖಲು

ತುಮಕೂರು: ಕಾಡಿನ ಆನೆಗಳಿಂದ ಇದೀಗ ನಾಡಿನ ಆನೆಗಳ ಸರದಿಗೆ ಬಂದಿದೆ. ಇಷ್ಟು ದಿನ ಕಾಡು ಪ್ರಾಣಿಗಳನ್ನು ಕೊಂದು ಅವುಗಳ ಚರ್ಮ, ಮೂಳೆ, ದಂತ, ಬಳಕೆಗೆ ಬರುವಂತಹ ಎಲ್ಲಾ ಅಂಗಾಂಗಳನ್ನು ಕದ್ದೊಯ್ಯುತ್ತಿದ್ದ ಖದೀಮರು ಈಗ ಸಾಕಾನೆಗಳ ಮೇಲೆ ಕಣ್ಣಾಕಿದ್ದಾರೆ.

ಅದೂ ಮಠದ ಆನೆ ಮೇಲೆ…ಸರ್ಕಸ್‌ನವರಿಗೆ ಮಾರಾಟ ಮಾಡಲು, ಪಳಗಿರುವ ಸಾಕಾನೆಗಾಗಿ ಹುಡುಕಾಟ ನಡೆಸಿದ ಖದೀಮರ ಗ್ಯಾಂಗ್‌ವೊಂದು ತುಮಕೂರಿನ ಕರಿಬಸವೇಶ್ವರ ಮಠದ ಆನೆ ಮೇಲೆ ಕೆಂಗಣ್ಣಿಟ್ಟಿದ್ದಾರೆ. ಮಠದ ಲಕ್ಷ್ಮೀ ಎಂಬ ಹೆಣ್ಣಾನೆಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಕಿಡ್ಯ್ನಾಪ್‌ ಮಾಡಿ ಗುಜರಾತ್‌ಗೆ ಸಾಗಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ದೇವರ ಕೃಪೆ ಮಾತು ಬರದ ಮೂಕಪ್ರಾಣಿಗಳ ಮೇಲಿರುತ್ತದೆ ಎಂಬುದು ಈ ವಿಚಾರದಲ್ಲಿ ಸಾಬೀತಾಗಿದೆ. ಚಿಕಿತ್ಸೆಗೆ ಬನ್ನೇರುಘಟ್ಟಕ್ಕೆ ಕರೆದೊಯ್ಯುವ ಬದಲಾಗಿ ಬೇರೆ ಕಡೆ ಸಾಗಿಸಿದ್ದಾರೆ. ಮಾರ್ಗ ಮಧ್ಯೆ ದಾಬಸ್‌ಪೇಟೆ ಬಳಿ ಮಠದ ಆನೆ ಮಾವುತನಿಗೆ ಹಲ್ಲೆ ಮಾಡಿ ಲಾರಿಯಿಂದ ಕೆಳಗಿಳಿಸಿದ್ದಾರೆ. ಬಳಿಕ ಆನೆಯನ್ನು ಕುಣಿಗಲ್‌ ತಾಲೂಕಿನ ನಾರನಹಳ್ಳಿಯಲ್ಲಿ  ಬಚ್ಚಿಟ್ಟಿದ್ದಾರೆ. ಮಾವುತನ ಜೊತೆಗೆ ಆನೆಗೆ ಜೆಸಿಬಿಯಿಂದ ಹಲ್ಲೆ ಮಾಡಿರುವುದಾಗಿ ಮಠದ ಸಿಬ್ಬಂದಿ ಆರೋಪಿಸಿದ್ದಾರೆ.

ಇಷ್ಟಕ್ಕೆಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಯೇ ಕಾರಣ ಅವರ ಕುಮ್ಮಕ್ಕಿನಿಂದಲೇ ಆನೆ ಅಪಹರಣ ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ  ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Share Post