Districts

ದೇಶಕ್ಕೆ ಹೊಸ ದಿಕ್ಸೂಚಿ ಕೊಟ್ಟ ಪ್ರಧಾನಿ ಮೋದಿ; ಸಿಎಂ ಬೊಮ್ಮಾಯಿ

ಉಡುಪಿ; ಭಾರತದಲ್ಲಿ ಈಗ ಹೊಸ ಮನ್ವಂತರ ಸೃಷ್ಟಿಯಾಗಿದೆ. ಪ್ರಧಾನಿ ಮೋದಿ ದೇಶಕ್ಕೆ ಹೊಸ ದಿಕ್ಸೂಚಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಟು ವರ್ಷ ತುಂಬಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.

 

ದೇಶದ ಭವಿಷ್ಯದ ಸುರಕ್ಷತೆಗೆ ಮೋದಿ ಅವಶ್ಯಕ. ಯಾಕಂದ್ರೆ ಮೋದಿ ಭಾರತ ದೇಶವನ್ನು ಹಾಗೂ ದೇಶದ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ತಿಳಿಸಿದರು. ಎಂಟು ವರ್ಷಗಳಲ್ಲಿ ಮೋದಿ ಸರ್ಕಾರದ ಕೊಡುಗೆಗಳನ್ನು ಜ್ಞಾಪಿಸಿಕೊಂಡ ಸಿಎಂ ಬೊಮ್ಮಾಯಿ, ಕೊವಿಡ್‌ ಸಂದರ್ಭದಲ್ಲಿ ಆತ್ಮ ನಿರ್ಭರ ಭಾರತ ಘೋಷಣೆ ಮಾಡಲಾಯಿತು. ಆ ಮೂಲಕ ಸಂಕಷ್ಟದಲ್ಲಿರುವ ಜನರು ಬದುಕು ಕಟ್ಟಿಕೊಳ್ಳಲು ಬುನಾದಿ ಹಾಕಲಾಯಿತು ಎಂದರು.

 

ದೇಶದ ಆಹಾರ ಹಾಗೂ ಕೆಲಸದ ಭದ್ರತೆಗೆ ಒತ್ತು ಕೊಡಲಾಗಿದೆ. ನವ ಭಾರತ ನಿರ್ಮಾಣ ಕನಸು ಯಶಸ್ವಿಯಾಗುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬುನಾದಿಯಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಲಾಗಿದೆ. ಮನೆಮನೆಗೂ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 25 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದೇವೆ ಎಂದು ಸಿಎಂ ಇದೇ ಹೇಳಿದ್ದಾರೆ.

Share Post