ಸಂಜೆ ಭಟ್ಕಳಕ್ಕೆ ಸಿಎಂ ಬೊಮ್ಮಾಯಿ ಭೇಟಿ; ಆರ್.ಅಶೋಕ್ ಸಾಥ್
ಕಾರವಾರ; ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹೀಗಾಗಿ, ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ರಾಜ್ಯ ಸರ್ಕಾರ ನೆರವಿಗೆ ನಿಲ್ಲುವ ಕೆಲಸ ಮಾಡುತ್ತಿದೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ಪ್ರವಾಹ ಪೀಡಿತ ಭಟ್ಕಳಕ್ಕೆ ಭೇಟಿ ನೀಡಲಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಕೂಡಾ ಸಿಎಂ ಜೊತೆಗೆ ತೆರಳಲಿದ್ದಾರೆ.
ಸಿಎಂ ಬೊಮ್ಮಾಯಿಯವರು ಬೆಂಗಳೂರಿನಿಂದ ವಿಮಾನದಲ್ಲಿ ಗೋವಾಕ್ಕೆ ಹೋಗಿ, ಅಲ್ಲಿಂದ ರಸ್ತೆ ಮೂಲಕ ಭಟ್ಕಳಕ್ಕೆ ಪ್ರಯಾಣಿಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಸಂಜೆ 6ಕ್ಕೆ ವಾಪಸಾಗಲಿದ್ದಾರೆ. ಸೋಮವಾರ ತಡರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಭಟ್ಕಳದಲ್ಲಿ ಹಿಂದೆಂದೂ ಕಂಡರಿಯದಂಥ ಪ್ರವಾಹ ಉಂಟಾಗಿತ್ತು. ದಾಖಲೆಯ 52 ಸೆಂ.ಮೀ ಮಳೆಯಾಗಿತ್ತು. ತಾಲ್ಲೂಕಿನ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದರು. ನೂರಾರು ಮನೆಗಳು, ಅಂಗಡಿಗಳು, ಕೃಷಿ ಜಮೀನಿಗೆ ಹಾನಿಯಾಗಿದೆ.