ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ 35 ಎಕರೆ ಕಬಳಿಕೆಗೆ ಯತ್ನ; ನಂತರ ಏನಾಯ್ತು..?
ಮಂಡ್ಯ; ಬದುಕಿದ್ದ ವ್ಯಕ್ತಿಯನ್ನು ಸತ್ತಿದ್ದಾರೆಂದು ತೋರಿಸಿ ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿ ಮಾಡಿ 35 ಎಕರೆ ಜಾಗವನ್ನು ಕಬಳಿಸುವ ಯತ್ನ ವಿಫಲವಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರು ಭೂಮಿ ಕಬಳಿಸಲು ಯತ್ನಿಸುತ್ತಿದ್ದ ಗ್ಯಾಂಗ್‌ನ್ನು ಬಂಧಿಸಿ ಜೈಲಿಗಟ್ಟಿದೆ. ಆರೋಪಿಗಳಲ್ಲಿ ನಿವೃತ್ತ ಗ್ರಾಮ ಲೆಕ್ಕಿಗ ಕೂಡಾ ಸೇರಿದ್ದಾನೆ.
ಬೆಂಗಳೂರು ಮೂಲದ ಗಿರೀಶ್ ರಾಜ್ ಎಂಬುವವರು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಎಂಬಲ್ಲಿ 35 ಎಕರೆ ಜಮೀನು ಹೊಂದಿದ್ದಾರೆ. ಈ ಜಾಗದ ಮೇಲೆ ಆರೋಪಿಗಳು ಕಣ್ಣಿಟ್ಟಿದ್ದರು. ಈ ಜಾಗ ಕಬಳಿಸಲು ಬದುಕಿರುವ ಗಿರೀಶ್ ರಾಜ್ ಅವರನ್ನು ಸತ್ತಿದ್ದಾರೆಂದು ಸುಳ್ಳು ಹೇಳಿದ್ದಾರೆ. ಅವರ ಹೆಸರಿನಲ್ಲಿ ಸುಳ್ಳು ಡೆತ್ ಸರ್ಟಿಫಿಕೇಟ್ ಸೃಷ್ಟಿ ಮಾಡಿದ್ದಾರೆ. ನಂತರ ಪೌತಿ ಖಾತೆಗೋಸ್ಕರ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಪರಿಶೀಲನೆ ವೇಳೆ ಗ್ರಾಮಲೆಕ್ಕಿಗ ಪ್ರವೀಣ್‌ಗೆ ವಂಚನೆ ಮಾಡುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಕೂಡಲೇ ಪ್ರವೀನ್ ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ತಹಸೀಲ್ದಾರ್ ಸೂಚನೆಯಂತೆ ಮಳವಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ಮೂಲದ ನಿವೃತ್ತ ಗ್ರಾಮ ಲೆಕ್ಕಿಗ ವೆಂಕಟೇಶ್, ದೇವರಾಜು, ಮುನಿರಾಜು ಹಾಗೂ ಕೇಶವಮೂರ್ತಿ ಎಂಬುವವರೇ ಬಂಧಿತ ಆರೋಪಿಗಳು. ಇವರು ನಕಲಿ ಸರ್ಕಾರಿ ಸೀಲ್ ಬಳಸಿ ಡೆತ್ ಸರ್ಟಿಫಿಕೇಟ್ ತಯಾರು ಮಾಡಿದ್ದಾರೆ. ನಂತರ ವಂಶವೃಕ್ಷ ಸಲ್ಲಿಕೆ ಮಾಡಿ ಗರೀಶ್ ರಾಜ್ ಮಗಳ ಹೆಸರಿಗೆ ಪೌತಿ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.