ಕಿಡಿಗೇಡಿಯೊಬ್ಬನ ಕಾರಣದಿಂದ ಹುಬ್ಬಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ
ಹುಬ್ಬಳ್ಳಿ: ಅವಳಿ ನಗರಿ ಹುಬ್ಬಳ್ಳಿಯಲ್ಲಿ ಕಿಡಿಕೇಡಿಯೊಬ್ಬನ ಕೃತ್ಯದಿಂದಾಗಿ ರಾತ್ರಿ ಬಿಗುವಿನ ವಾತಾವರಣ ಉಂಟಾಗಿತ್ತು. ಪ್ರಾರ್ಥನಾ ಸ್ಥಳವೊಂದರ ಮೇಲೆ ಧ್ವಜವೊಂದನ್ನು ಹಾರಿಸಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಕಳೆದ ರಾತ್ರಿ ಗದ್ದಲ ಸೃಷ್ಟಿಯಾಗಿತ್ತು. ಈ ವೇಳೆ ಕಲ್ಲು ತೂರಾಟ ಕೂಡಾ ನಡೆದಿದೆ.
ಧಾರ್ಮಿಕತೆಗೆ ಧಕ್ಕೆ ಉಂಟಾಗುವ ವಿಡಿಯೋ ಪೋಸ್ಟ್ ಮಾಡಿದ್ದು, ಯುವಕನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂಗೊಂಡಿವೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.