100 ಕೋಟಿ ಕೊಟ್ಟರೆ ರಾಜ್ಯಪಾಲ ಹುದ್ದೆ ಕೊಡಿಸ್ತಾರಂತೆ; ಖತರ್ನಾಕ್ ಗ್ಯಾಂಗ್ ಅರೆಸ್ಟ್
ನವದೆಹಲಿ; ಕೆಲಸ ಕೊಡಿಸ್ತೀವಿ ಅಂತ ಹೇಳಿ ಮೋಸ ಮಾಡುವವರನ್ನು ನೋಡಿದ್ದೇವೆ. ಆದ್ರೆ ಇಲ್ಲಿ ಖದೀಮರ ಗುಂಪು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ನೂರು ಕೋಟಿ ಕೊಟ್ರೆ ರಾಜ್ಯಪಾಲರ ಹುದ್ದೆಯನ್ನೇ ಕರುಣಿಸ್ತೀವಿ ಎಂದು ಹೇಳಿ ವಂಚಿಸುವ ಪ್ರಯತ್ನ ಮಾಡಿದೆ. ಆದ್ರೆ ಅವರ ಅದೃಷ್ಟ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ಅಧಿಕಾರಿಗಳು ಇಂತಹ ಮೋಸದ ಜಾಲವನ್ನು ಪತ್ತೆ ಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ಆರೋಪಿಯೊಬ್ಬ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಲಾತೂರ್‌ನ ಕಮಲಾಕರ್ ಪ್ರೇಮಕುಮಾರ್ ಬಂಡಗರ್, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ್ ನಾಯಕ್ ಮತ್ತು ದೆಹಲಿ-ಎನ್‌ಸಿಆರ್ ಮೂಲದ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಮತ್ತು ಮೊಹಮ್ಮದ್ ಐಜಾಜ್ ಖಾನ್ ಅವರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ನೀಡಿದರೆ ರಾಜ್ಯಸಭೆಯ ಸ್ಥಾನ ಅಥವಾ ರಾಜ್ಯಪಾಲರ ಹುದ್ದೆ, ಕೇಂದ್ರ ಸರ್ಕಾರದ ಸಚಿವಾಲಯ ಮತ್ತು ಇತರೆ ಇಲಾಖೆಗಳ ಅಡಿಯಲ್ಲಿ ಬರುವ ಸರ್ಕಾರದ ವಿವಿಧ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ನಂಬಿಸಿ ಈ ಗ್ಯಾಂಗ್ ಶ್ರೀಮಂತರನ್ನು ಯಾಮಾರಿಸುತ್ತಿತ್ತು ಎಂದು ತಿಳಿದುಬಂದಿದೆ.