CrimeNational

ಪೊಲೀಸ್‌ ಮೇಲೆ ಕೋಪ; ಆತನ ಹೆಂಡತಿ, ಮಗಳ ಕೊಲೆ!

ರಾಯ್‌ಪುರ; ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಮೇಲಿನ ಕೋಪಕ್ಕೆ ದುಷ್ಕರ್ಮಿಯೊಬ್ಬ ಅವರ ಹೆಂಡತಿ ಮಗಳನ್ನು ಕೊಲೆ ಮಾಡಿದ್ದಾನೆ.. ಪೊಲೀಸ್‌ ಹೆಡ್‌ಕಾನ್ಸ್‌ಟೇಬಲ್‌ ಒಬ್ಬನನ್ನು ಕೊಲೆ ಮಾಡಲೆಂದು ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗೆ ಹೆಡ್‌ ಕಾನ್ಸ್‌ಟೇಬಲ್‌ ಸಿಕ್ಕಿಲ್ಲ.. ಆದ್ರೆ ಮನೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಪತ್ನಿ ಹಾಗೂ ಮಗಳಿದ್ದರು.. ಹೀಗಾಗಿ ದುಷ್ಕರ್ಮಿ ಅವರಿಬ್ಬರನ್ನೇ ಕೊಂದು ಸೇಡು ತೀರಿಸಿಕೊಂಡಿದ್ದಾನೆ..
ಛತ್ತಿಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಪೊಲೀಸ್‌ ಹೆಡ್‌ಕಾನ್ಸ್‌ಟೇಬಲ್‌ ತಾಲಿಬ್‌ ಶೇಖ್‌ ಅವರ ಪತ್ನಿ ಹಾಗೂ ಮಗಳೇ ಕೊಲೆಯಾದವರು.. ಕುಖ್ಯಾತ ಪಾತಕಿ ಕುಲದೀಪ್‌ ಸಾಹು ಎಂಬಾತ ಈ ಕೃತ್ಯ ಎಸಗಿದ್ದಾನೆ.. ಕೊಲೆ ಮಾಡಿದ್ದಲ್ಲದೆ, ಇಬ್ಬರನ್ನೂ ಅರೆಬೆತ್ತಲೆ ಮಾಡಿ ದೇಹಗಳನ್ನು ಕಾಲುವೆಗೆ ಎಸೆದು ವಿಕೃತಿ ಮೆರೆದಿದ್ದಾನೆ..
ದುರ್ಗಾ ಮೂರ್ತಿ ವಿಸರ್ಜನೆ ಸಮಯದಲ್ಲಿ ಪಾತಕಿ ಕುಲದೀಪ್‌ ಸಾಹು ಹಾಗೂ ಕಾನ್ಸ್‌ಟೇಬಲ್‌ ಘನಶ್ಯಾಮ್‌ ಸೋನ್ವಾನಿ ನಡುವೆ ಗಲಾಟೆ ನಡೆದಿತ್ತು.. ಸಾಹು ಕಾನ್ಸ್‌ಟೇಬಲ್‌ ಘನಶ್ಯಾಮ್‌ ಮೇಲೆ ಕುದಿಯುವ ಎಣ್ಣೆ ಎರಚಿ ಎಸ್ಕೇಪ್‌ ಆಗಿದ್ದ.. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.. ಈ ಕಾರ್ಯಾಚರಣೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ತಾಲಿಬ್‌ ಶೇಖ್‌ ಪ್ರಮುಖವಾಗಿ ಪಾಲ್ಗೊಂಡಿದ್ದರು. ಈ ಕಾರಣಕ್ಕೆ ಹೆಡ್‌ಕಾನ್ಸ್‌ಟೇಬಲ್‌ ಶೇಖ್‌ ಮೇಲೆ ಪಾತಕಿ ಸಾಹು ಕತ್ತಿಯಿಂದ ದಾಳಿ ಕೂಡಾ ಮಾಡಿದ್ದ..
ಇದಾದ ನಂತರ ಶೇಖ್‌ ಮನೆಗೆ ನುಗ್ಗಿರುವ ದುಷ್ಕರ್ಮಿ, ಹೆಡ್‌ಕಾನ್ಸ್‌ಟೇಬಲ್‌ ಶೇಖ್‌ ಪತ್ನಿ ಮೆಹು ಫೈಜ್‌ ಹಾಗೂ 16 ವರ್ಷದ ಮಗಳು ಅಲಿಯಾ ಶೇಖ್‌ ಅವರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಅನಂತರ ದೇಹಗಳನ್ನು ಅರೆಬೆತ್ತಲೆ ಮಾಡಿ ಕಾಲುವೆಗೆ ಎಸೆದುಬಂದಿದ್ದಾನೆ.. ರಾತ್ರಿ ಗಸ್ತಿನಲ್ಲಿದ್ದ ಶೇಖ್‌ ಮನೆಗೆ ಹಿಂತಿರುಗಿದಾಗ ಮನೆಯಲ್ಲಿ ರಕ್ತಸಿಕ್ತ ಸನ್ನಿವೇಶ ನೋಡಿ ಶಾಕ್‌ ಆಗಿದ್ದಾರೆ.. ನಂತರ ಹುಡುಕಾಡಿದಾಗ ಇಬ್ಬರು ದೇಹಗಳು ಕಾಲುವೆ ಬಳಿ ಸಿಕ್ಕಿವೆ..

Share Post