ಹಿಂದಿ ರಾಷ್ಟ್ರ ಭಾಷೆ ವಿಚಾರ; ಅಜಯ್ ದೇವಗನ್ ಪ್ರತಿಕ್ರಿಯೆಗೆ ಸುದೀಪ್ ಹೇಳಿದ್ದೇನು..?
ಬೆಂಗಳೂರು: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳಿದ್ದರು. ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದು, ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಸುದೀಪ್ ಕೂಡಾ ತಕ್ಕ ಸಮಜಾಯಿಷಿ ನೀಡಿದ್ದಾರೆ.
ಅಜಯ್ ದೇವಗನ್ ಟ್ವೀಟ್‌ನಲ್ಲೇನಿದೆ..?
ಹಿಂದಿ ನ್ಯಾಷನಲ್ ಲಾಂಗ್ವೇಜ್ ಅಲ್ಲ ಅಂದ ಮೇಲೆ ನಿಮ್ಮ ಮಾತೃಭಾಷೆ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ..? ಹಿಂದಿ ನಮ್ಮ ಮಾತೃಭಾಷೆ. ಹಾಗೆಯೇ ಹಿಂದಿ ರಾಷ್ಟ್ರೀಯ ಭಾಷೆಯೂ ಆಗಿತ್ತು. ಆಗಿದೆ ಮತ್ತು ಮುಂದೆಯೂ ಆಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಪ್ರತಿಕ್ರಿಯೆ ಏನು..?
ಹಲೋ @ajaydevgn ಸರ್.. ನಾನು ಆ ಸಾಲನ್ನು ಏಕೆ ಹೇಳಿದ್ದೇನೋ, ಅದು ನಿಮಗೆ ತಲುಪುವ ವೇಳೆಗೆ ಬೇರೆಯೇ ಅರ್ಥ ಪಡೆದುಕೊಂಡಿದೆ ಎಂದು ನಾನು ಭಾವಿಸುತ್ತೇವೆ. ನನ್ನ ಹೇಳಿಕೆ ನೀವು ಊಹಿಸಿರುವುದಕ್ಕೆ ಸಂಪೂರ್ಣ ಭಿನ್ನವಾಗಿದೆ. ನಾನು ಖುದ್ದಾಗಿ ನಿಮ್ಮನ್ನ ಭೇಟಿಯಾದಾಗ ನಾನು ಏಕೆ ಆ ಹೇಳಿಕೆ ನೀಡಿದೆ ಎಂಬುದಕ್ಕೆ ವಿವರಣೆ ನೀಡುವೆ. ನನ್ನ ಈ ಹೇಳಿಕೆ ಯಾರನ್ನೋ ನೋಯಿಸಲು, ಪ್ರಚೋದಿಸಲು ಅಥವಾ ಯಾವುದೇ ಚರ್ಚೆ ಹುಟ್ಟುಹಾಕಲು ನೀಡಿಲ್ಲ. ನಾನ್ಯಾಕೆ ಅದನ್ನು ಮಾಡಲಿ ಸರ್.
ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಯಾಕಂದ್ರೆ, ನಾವು ಪ್ರೀತಿಯಿಂದ ಹಾಗೂ ಗೌರವದಿಂದ ಹಿಂದಿ ಕಲಿತಿದ್ದೇವೆ. ಆದರೆ, ನಿಮ್ಮ ಟ್ವೀಟ್‌ಗೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್..?
ನಮ್ಮ ದೇಶದ ಪ್ರತಿಯೊಂದು ಭಾಷೆಯನ್ನು ನಾನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಸರ್. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸೋಣವೆಂದು ನಾನು ಬಯಸುತ್ತೇನೆ. ನಾನು ಈ ಹೇಳಿಕೆಯನ್ನು ಸಂಪೂರ್ಣವಾಗಿ ವಿಭಿನ್ನ ಸನ್ನಿವೇಶದಲ್ಲಿ ಹೇಳಿದ್ದೇನೆ. ನಿಮ್ಮ ಮೇಲೆ ತುಂಬಾ ಪ್ರೀತಿ ಹಾಗೂ ವಿಶ್ವಾಸ ಯಾವಾಗಲೂ ನನಗಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆಂದು ಆಶಿಸುತ್ತೇನೆ.