BengaluruPolitics

ಸತತ ಏಳು ಬಾರಿ ಗೆಲುವು; ರಾಮಲಿಂಗಾರೆಡ್ಡಿ ಸೋಲಿಲ್ಲದ ಸರದಾರನಾಗಿದ್ದು ಹೇಗೆ..?

ಬೆಂಗಳೂರು; ಬೆಂಗಳೂರು ನಗರದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿ ಹಲವು ನಾಯಕರು ಸತತವಾಗಿ ಗೆಲ್ಲುತ್ತಲೇ ಬರುತ್ತಿದ್ದಾರೆ. ಅವರಿಗೆ ಎದುರಾಳಿಯೇ ಇಲ್ಲದ ಪರಿಸ್ಥಿತಿ. ಅಂತಹ ಕ್ಷೇತ್ರಗಳಲ್ಲಿ ಬಿಟಿಎಂ ಲೇಔಟ್‌ ಕ್ಷೇತ್ರ ಕೂಡಾ ಒಂದು. ಇಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸತತ ಮೂರು ಬಾರಿ ಗೆದ್ದಿದ್ದಾರೆ. ಬಿಟಿಎಂ ಲೇಔಟ್‌ನಲ್ಲಿನಲ್ಲಿ ನಾಲ್ಕನೇ ಬಾರಿ ಗೆಲುವಿನ ನಗೆ ಬೀರೋದಕ್ಕೆ ರಾಮಲಿಂಗಾರೆಡ್ಡಿ ಸಿದ್ಧತೆ ನಡೆಸಿದ್ದಾರೆ. ಅಂದಹಾಗೆ, ರಾಮಲಿಂಗಾರೆಡ್ಡಿಯವರು ಬಿಟಿಎಂ ಲೇಔಟ್‌ ಕ್ಷೇತ್ರಕ್ಕೆ ಬರುವ ಮೊದಲ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಲ್ಲಿ ಕೂಡಾ ಅವರು ನಾಲ್ಕು ಬಾತಿ ಸತತವಾಗಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಅವರ ಪುತ್ರಿ ಸೌಮ್ಯಾರೆಡ್ಡಿಯವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಲಿಂಗಾರೆಡ್ಡಿಯವರು ಬಿಟಿಎಂ ಲೇಔಟ್‌ಗೆ ಹೋದ ಮೇಲೆ ಜಯನಗರ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಆದ್ರೆ ಇದೀಗ ರಾಮಲಿಂಗಾರೆಡ್ಡಿಯವರು ತಮ್ಮ ಪುತ್ರಿಯ ಮೂಲಕ ಆ ಕ್ಷೇತ್ರ ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಬಿಟಿಎಂಟಿ ಲೇಔಟ್‌ನಲ್ಲಿ ಹ್ಯಾಟ್ರಿಕ್‌ ಗೆಲುವು

೧. ಬಿಟಿಎಂ ಲೇಔಟ್‌ನಲ್ಲಿ 2008ರಲ್ಲಿ ಮೊದಲ ಗೆಲುವು
೨. 2013, 2018ರ ಚುನಾವಣೆಗಳಲ್ಲೂ ಗೆಲುವಿನ ನಗೆ
೩. 1989 ರಂದ 2008ರವರೆಗೆ ಜಯನಗರದಲ್ಲಿ ಸತತ ನಾಲ್ಕು ಗೆಲುವು

ರಾಮಲಿಂಗಾರೆಡ್ಡಿಯವರು 1989ರಲ್ಲಿ ಮೊದಲ ಬಾರಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು. ಅಂದು ಅವರ ಬಳಿ ಹಣವೂ ಇರಲಿಲ್ಲ. ಹೋರಾಟದ ಮೂಲಕ ಅವರು ಜನನಾಯಕರೆನಿಸಿಕೊಂಡಿದ್ದರು. ಈ ಕಾರಣದಿಂದಾಗಿ ಅಂದು ಜನ ಹಣ ಸಂಗ್ರಹ ಮಾಡಿ ರಾಮಲಿಂಗಾರೆಡ್ಡಿಯವರಿಗೆ ಕೊಟ್ಟಿದ್ದರು. ಅದೇ ಹಣದಲ್ಲಿ ರಾಮಲಿಂಗಾರೆಡ್ಡಿ ಗೆದ್ದುಬಂದಿದ್ದರು. ಅನಂತರ ಸತತವಾಗಿ ನಾಲ್ಕು ಚುನಾವಣೆಗಳನ್ನು ರಾಮಲಿಂಗಾರೆಡ್ಡಿ ಗೆದ್ದರು.

ಆದ್ರೆ 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಾಯಿತು. ಆಗ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ ಹುಟ್ಟಿಕೊಳ್ತು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ರಾಮಲಿಂಗಾರೆಡ್ಡಿ ಬೆಂಬಲಿಸುವ ಮತದಾರರು ಹೆಚ್ಚಿದ್ದರು. ಹೀಗಾಗಿ ಅವರು ಅಂದು ಬಿಟಿಎಂ ಲೇಔಟ್‌ ಆಯ್ಕೆ ಮಾಡಿಕೊಂಡರು. ಆಗ ಸರಳ ಹಾಗೂ ಕ್ಷೇತ್ರದಲ್ಲಿ ಜನ ವಿಶ್ವಾಸ ಗಳಿಸಿದ್ದ ವಿಜಯ್‌ ಕುಮಾರ್‌ ಅವರಿಗೆ ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ನೀಡಿತು. ವಿಜಯ್‌ ಕುಮಾರ್‌ ಸರಳ, ಸಜ್ಜನ ವ್ಯಕ್ತಿಯಾಗಿದ್ದರಿಂದ ಜಯನಗರದ ಜನರು ವಿಜಯ್‌ ಕುಮಾರ್‌ಗೆ ಮಣೆ ಹಾಕಿದರು. 2008 ಹಾಗೂ 2013ರಲ್ಲಿ ಜಯನಗರದ ಜನ ಬಿಜೆಪಿ ಅಭ್ಯರ್ಥಿ ವಿಜಯ್‌ ಕುಮಾರ್‌ ಅವರನ್ನು ಗೆಲ್ಲಿಸಿದರು. ಆದ್ರೆ, 2018ರ ಚುನಾವಣೆ ಸಮಯದಲ್ಲಿ ವಿಜಯ್‌ ಕುಮಾರ್‌ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆದ್ರೆ, ಚುನಾವಣೆ ಸಮಯದಲ್ಲಿ ವಿಜಯ್‌ ಕುಮಾರ್‌ ಅಕಾಲಿಕ ಮರಣಕ್ಕೀಡಾದರು. ಹೀಗಾಗಿ ಜಯನಗರ ಚುನಾವಣೆ ಒಂದು ತಿಂಗಳು ಮುಂದೂಡಲಾಯಿತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯ್‌ ಕುಮಾರ್‌ ಅವರ ಸಹೋದರನಿಗೆ ಟಿಕೆಟ್‌ ನೀಡಿತ್ತು. ಕಾಂಗ್ರೆಸ್‌ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್‌ ನೀಡಿತು. ಆಗ ಸೌಮ್ಯಾರೆಡ್ಡಿ ಮೂರು ಸಾವಿರ ಮತಗಳ ಅಂತರದಿಂದ ಗೆದ್ದರು. ವಿಜಯ್‌ ಕುಮಾರ್‌ ಅವರನ್ನು ಕಳೆದುಕೊಂಡಿದ್ದ ಸಿಂಪತಿ ನಡುವೆಯೂ ಅವರ ಸಹೋದರ ಪ್ರಹ್ಲಾದ್‌ ಗೆಲ್ಲಲಾಗಲಿಲ್ಲ.

ಬಿಟಿಎಂ ಲೇಔಟ್‌ನ 3 ಚುನಾವಣೆಗಳ ಫಲಿತಾಂಶ;

2018
ಕಾಂಗ್ರೆಸ್‌ -ರಾಮಲಿಂಗಾರೆಡ್ಡಿ – 67085
ಬಿಜೆಪಿ – ಲಲ್ಲೇಶ್‌ ರೆಡ್ಡಿ – 46607

2013
ಕಾಂಗ್ರೆಸ್‌ – ರಾಮಲಿಂಗಾರೆಡ್ಡಿ – 69712
ಬಿಜೆಪಿ – ಎನ್‌.ಸುಧಾಕರ್‌ – 20664

2008
ಕಾಂಗ್ರೆಸ್‌ – ರಾಮಲಿಂಗಾರೆಡ್ಡಿ – 46805
ಬಿಜೆಪಿ – ಪ್ರಸಾದ್‌ ರೆಡ್ಡಿ – 44949

ಬಿಟಿಎಂ ಲೇಔಟ್‌ ಈ ಮೊದಲ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಅದು ಏಷ್ಯಾದಲ್ಲೇ ಅತಿದೊಡ್ಡ ಕ್ಷೇತ್ರವಾಗಿತ್ತು. ಈ ಕಾರಣದಿಂದಾಗಿ 2008ರಲ್ಲಿ ಮರುವಿಂಗಡಣೆ ಮಾಡಲಾಯಿತು. ಬಿಟಿಎಂ ಕ್ಷೇತ್ರವನ್ನು ಅಸ್ತಿತ್ವಕ್ಕೆ ತರಲಾಯಿತು. ಬಿಟಿಎಂ ಲೇಔಟ್‌, ಜಕ್ಕಸಂದ್ರ, ಈಜಿಪುರ, ಕೋರಮಂಗಲ, ಲಕ್ಕಸಂದ್ರ, ಸದ್ದುಗುಂಟೆ ಪಾಳ್ಯಗಳು ಬಿಟಿಎಂ ಲೇಔಟ್‌ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೇಲೆ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿಯವರಿಗೆ ಬಿಜೆಪಿ ಅಭ್ಯರ್ಥಿ ಪ್ರಸಾದ್‌ ರೆಡ್ಡಿ ಪ್ರಬಲ ಪೈಪೋಟಿ ನೀಡಿದ್ದರು. ಅನಂತರ ಚುನಾವಣೆಗಳಲ್ಲಿ ರಾಮಲಿಂಗಾರೆಡ್ಡಿ ಭಾರಿ ಅಂತರದ ಗೆಲುವು ಸಾಧಿಸುತ್ತಾ ಬಂದರು.

ಬಿಟಿಎಂ ಕ್ಷೇತ್ರದ ಮತದಾರರ ಸಂಖ್ಯೆ

ಪುರುಷರು – 1,38,299
ಮಹಿಳೆಯರು – 1,26,212
ತೃತೀಯಲಿಂಗಿಗಳು – 42
ಒಟ್ಟು ಮತದಾರರು – 2,64,553

ಈ ಕ್ಷೇತ್ರದಲ್ಲಿ ರೆಡ್ಡಿಗಳ ಪ್ರಾಬಲ್ಯ ಹೆಚ್ಚಿದೆ. ಹೀಗಾಗಿ ಎಲ್ಲಾ ಪಕ್ಷದವರೂ ರೆಡ್ಡಿಗಳಿಗೇ ಹೆಚ್ಚು ಮಣೆ ಹಾಕುತ್ತವೆ. ಈ ಬಾರಿ ಬಿಜೆಪಿಯಲ್ಲಿ ಮೂವರು ಆಕಾಂಕ್ಷಿಗಳಿದ್ದರು. ಯುವ ಮುಖಂಡ ಅನಿಲ್‌ ಶೆಟ್ಟಿ, ಜಯದೇವ್‌ ಹಾಗೂ ಶ್ರೀಧರ್‌ ರೆಡ್ಡಿ ಟಿಕೆಟ್‌ ಬಯಸಿದ್ದರು. ಬಿಜೆಪಿಗೆ ಅಳೆದೂತೂಗಿ ಶ್ರೀಧರ್‌ ರೆಡ್ಡಿಗೆ ಟಿಕೆಟ್‌ ಕೊಟ್ಟಿದೆ. ಹೀಗಾಗಿ ಈ ಬಾರಿಯೂ ರೆಡ್ಡಿಗಳ ನಡುವೆಯೇ ಫೈಟ್‌ ನಡೆಯುತ್ತಿದೆ.

Share Post