BengaluruPolitics

ರಾಜ್ಯ ವಿಧಾನಸಭಾ ಚುನಾವಣೆ ಯಾವಾಗ..?; ಯಾವಾಗ ನೀತಿ ಸಂಹಿತೆ ಜಾರಿಯಾಗುತ್ತೆ ಗೊತ್ತಾ..?

ಬೆಂಗಳೂರು; ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಪ್ರಚಾರದ ಭರಾಟೆ ಶುರು ಮಾಡಿವೆ. ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದರೆ, ಜೆಡಿಎಸ್‌ ಪಂಚರತ್ನ ಯಾತ್ರೆ ಮಾಡುತ್ತಿದೆ. ಇತ್ತ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದೆ. ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಮೂರು ದಿಕ್ಕುಗಳಿಂದ ರಥಯಾತ್ರೆ ಆರಂಭಿಸುತ್ತಿದ್ದಾರೆ. ಆದ್ರೆ ಚುನಾವಣೆ ಯಾವಾಗ ನಡೆಯಬಹುದು ಅನ್ನೋದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.

2018ರ ಮೇ 27ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗಬೇಕಿದೆ. ಹೀಗಾಗಿ ಶೀಘ್ರದಲ್ಲೇ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಆದ್ರೆ ಅದಕ್ಕಿಂತ ಮೊದಲು ಸರ್ಕಾರ ಹಲವು ನಿರ್ಧಾರಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯ ನಂತರ ಬಿಬಿಎಂಪಿ ಚುನಾವಣೆಯೂ ನಡೆಯಲಿದೆ. ಹೀಗಾಗಿ ಎರಡಕ್ಕೂ ಸಿದ್ಧವಾಗಬೇಕಿದೆ. ರಾಜ್ಯ ಬಿಜೆಪಿ ಸರ್ಕಾರ ಕೂಡಾ ಎರಡನ್ನೂ ಗಮನದಲ್ಲಿಟ್ಟುಕೊಂಡಿದೆ. ಜೊತೆಗೆ ಜನರನ್ನು ಒಲಿಸಿಕೊಳ್ಳಲು ಸರ್ಕಾರ ಕೊನೇ ಕ್ಷಣದ ಕಸರತ್ತು ಕೂಡಾ ಮಾಡ್ತಾ ಇದೆ. ಸಾಧ್ಯವಾದಷ್ಟು ಚುನಾವಣೆ ಘೋಷಣೆಯಾಗುವಷ್ಟರಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಜಾರಿ, ಪೌರ ಕಾರ್ಮಿಕರ ನೇಮಕಾತಿ ಕಾಯಂ ಸೇರಿದಂತೆ ಹಲವು ಆದೇಶಗಳನ್ನು ಹೊರಡಿಸಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಜೊತೆಜೊತೆಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೂ ಆತುರಾತುರವಾಗಿ ಚಾಲನೆ ನೀಡಲು ಮುಂದಾಗಿದೆ. ಎಲ್ಲಾ ಆದೇಶಗಳನ್ನೂ ಮಾಡಿದ ನಂತರ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಅಂದಹಾಗೆ, 35 ರಿಂದ 40 ದಿನಗಳ ಮೊದಲೇ ಚುನಾವಣೆ ಘೋಷಣೆ ಮಾಡಬೇಕು. ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಮೇ ಕೊನೆ ವಾರದಲ್ಲಿ ಸರ್ಕಾರ ರಚನೆ ಮಾಡಬೇಕಿರುವುದರಿಂದ ಏಪ್ರಿಲ್‌ ಮೊದಲ ವಾರದಲ್ಲೇ ಚುನಾವಣೆ ಘೋಷಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಷ್ಟರೊಳಗೆ ಬಹುತೇಕ ಎಲ್ಲಾ ಪರೀಕ್ಷೆಗಳೂ ಮುಗಿಯುವಂತೆ ನೋಡಿಕೊಳ್ಳಲಾಗುತ್ತಿದೆ. ಏಪ್ರಿಲ್‌ ಮೂರು ರಿಂದ ಐದರೊಳಗೆ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

ಮೇ ಮೊದಲ ವಾರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮೇ ಎರಡು ಅಥವಾ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಮೇ ಕೊನೆಯ ವಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.

Share Post