BengaluruDistrictsPolitics

ಕುಣಿಯಲಾರದವರು ನೆಲ ಡೊಂಕು ಅಂದರಂತೆ; ಕಾಂಗ್ರೆಸ್‌ ವಿರುದ್ಧ ಪ್ರಹ್ಲಾದ್‌ ಜೋಶಿ ಆಕ್ರೋಶ

ಬೆಂಗಳೂರು; ಕೇಂದ್ರ ಸರ್ಕಾರ ರಾಜ್ಯದ ಬಡವರಿಗೆ ಪ್ರತಿ ತಿಂಗಳೂರು ಐದು ಕೆಜಿ ಉಚಿತ ಅಕ್ಕಿ ನೀಡುತ್ತಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಬಂದು ಒಂದು ತಿಂಗಳಾದರೂ ಒಂದು ಕೆಜಿ ಅಕ್ಕಿ ಕೊಡೋದಕ್ಕೆ ಅವರ ಕೈಯಲ್ಲಿ ಸಾಧ್ಯವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿರೋದು. ದೇಶಾದ್ಯಂತ 80 ಕೋಟಿ ಬಡವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ಕೊಡುತ್ತಿದೆ ಎಂದು ಹೇಳಿದರು.

ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಅಡಿ ನಾವು ಅಕ್ಕಿ ಪೂರೈಕೆ ಮಾಡುತ್ತಿದ್ದೇವೆ. ಈ ಕಾಯ್ದೆಯನ್ನು ನಾವು ಮಾಡಿದ್ದು ಎಂದು ಕಾಂಗ್ರೆಸ್‌ ನವರು ಹೇಳಿಕೊಳ್ಳುತ್ತಾರೆ. ಆದ್ರೆ ಆ ಆಕ್ಟ್‌ನಡಿ ಕಾಂಗ್ರೆಸ್‌ ಸರ್ಕಾರ ಹಣ ಮೀಸಲಿರಿಸಿರಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಆಹಾರ ಭದ್ರತಾ ಕಾಯ್ದೆಗೆ ಮಹತ್ವ ಬಂತು ಎಂದು ಪ್ರಹ್ಲಾದ್‌ ಜೋಶಿ ಹೇಳಿದರು.

ಕಾಂಗ್ರೆಸ್‌ ನವರು ಚುನಾವಣೆ ಸಮಯದಲ್ಲಿ ಎಫ್‌‌ಸಿಐನವರು ಅಕ್ಕಿ ಕೊಟ್ಟರೆ ನಾವು ಕೊಡುತ್ತೇವೆ ಎಂದು ಹೇಳಿಲ್ಲ. ಬಡವರಿಗೆ ಹತ್ತು ಕೆಜಿ ಉಚಿತವಾಗಿ ಅಕ್ಕಿ ಕೊಡುತ್ತೇವೆ ಅಂತಷ್ಟೇ ಹೇಳಿದ್ದಾರೆ. ಈಗ ನೋಡಿದರೆ ಕೇಂದ್ರ ಸರ್ಕಾರದ ಮೇಲೆ ದೂರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಕುಣಿಯಲಾರದವರು ನೆಲ ಡೊಂಕು ಅನ್ನೋ ರೀತಿ ವರ್ತಿಸುತ್ತಿದ್ದಾರೆ ಎಂದೂ ಪ್ರಹ್ಲಾದ್‌ ಜೋಶಿ ಲೇವಡಿ ಮಾಡಿದ್ದಾರೆ.

Share Post