ಮಹಿಳೆ ಜೊತೆ ಕ್ಯಾಬ್ ಚಾಲಕನ ಅಸಭ್ಯ ವರ್ತನೆ; ಏನಾಯ್ತು ಗೊತ್ತಾ..?
ಬೆಂಗಳೂರು; ಮಹಿಳಾ ಗ್ರಾಹಕರ ಮೇಲೆ ಕ್ಯಾಬ್ ಡ್ರೈವರ್ ಗಳು ಅಸಭ್ಯವಾಗಿ ವರ್ತಿಸುವ ಘಟನೆಗಳು ಬೆಂಗಳೂರಿನಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ. ಉಬರ್ ಚಾಲಕನೊಬ್ಬನ ವರ್ತನೆ ವಿರುದ್ಧ ಮಹಿಳೆಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದು, ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾಳೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಕೊಂಡ ಉಬರ್ ಸಂಸ್ಥೆ ಆರೋಪಿ ಚಾಲಕನ ವಿರುದ್ಧ ಕ್ರಮ ಕೈಗೊಂಡಿದೆ. ಜೊತೆಗೆ ಗ್ರಾಹಕಿ ಜೊತೆ ಮಾತನಾಡಿ, ಸಾರಿ ಹೇಳಿದೆ. ಮಹಿಳೆ ನಿನ್ನೆ ಬಿಟಿಎಂ 2 ನೇ ಹಂತದಿಂದ ಜೆಪಿ ನಗರ ಮೆಟ್ರೋಗೆ ಕ್ಯಾಬ್ ಬುಕ್ ಮಾಡಿದ್ದರು. ಚಾಲಕ ಸಮಯಕ್ಕೆ ಸರಿಯಾಗಿ ಬಂದನು ಮತ್ತು ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಚಾಲಕ ಮಾರ್ಗ ಬದಲಾಯಿಸಿದನು. ಪರಿಚಯವಿಲ್ಲದ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಮಹಿಳೆ ಕೂಡಲೇ ಆತನನ್ನು ಎಚ್ಚರಿಸಿದ್ದಾಳೆ. ಕೊನೆಗೆ ಆತ ಸರಿಯಾದ ದಾರಿಗೆ ಬಂದಿದ್ದಾನೆ.
ಕೊನೆಗೂ ತಲುಪಬೇಕಾದ ಸ್ಥಳ ತಲುಪಿ, ಮಹಿಳೆ ಹಣ ಪಾವತಿಸಿದ್ದಾಳೆ. ಅನಂತರ ಆ ಚಾಲಕ ತನ್ನ ಖಾಸಗಿ ಅಂಗಗಳನ್ನು ತೋರಿಸಿ ವಿಕೃತ ವರ್ತನೆ ತೋರಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿದ್ದಾಗಿ ಮಹಿಳೆ ಬರೆದುಕೊಂಡಿದ್ದಾಳೆ. ಕೂಡಲೇ ಮಹಿಳೆ ಅಲ್ಲಿಂದ ಓಡಿಹೋಗಿದ್ದಾಗಿಯೂ ಹೇಳಿಕೊಂಡಿದ್ದಾಳೆ. ಅನಂತರದ ಪೋಸ್ಟ್‌ನಲ್ಲಿ ಊಬರ್‌ನವರು ಕರೆ ಮಾಡಿ ಡ್ರೈವರ್ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿದ್ದಾಗಿ ಬರೆದುಕೊಂಡಿದ್ದಾರೆ.