ರಿಟ್ ಅರ್ಜಿ ವಜಾ: ಸೂರಜ್ ರೇವಣ್ಣಗೆ ರಿಲೀಫ್
ಬೆಂಗಳೂರು: ಸೂರಜ್ ರೇವಣ್ಣ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದು, ಅವರ ನಾಮಪತ್ರ ತಿರಸ್ಕರಿಸುವಂತೆ ಕೋರಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಾಸನ ಜಿಲ್ಲೆಯ ಕುಂದೂರು ಗ್ರಾಮದ ಕೆ.ಎಲ್.ಹರೀಶ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಚುನಾವಣೆ ವೇಳಾಪಟ್ಟು ಘೋಷಣೆಯಾದ ಮೇಲೆ ಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಆಕ್ಷೇಪಣೆ ಏನಿದ್ದರೂ ಚುನಾವಣಾ ಆಯೋಗಕ್ಕೆ ಸಲ್ಲಿಸಿ ಎಂದು ಸೂಚಿಸಿದೆ.
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ, ಹಾಸನ ವಿಧಾನಪರಿಷತ್ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರದ ಜೊತೆ ನೀಡಿರುವ ನಮೂನೆ ೨೬ರ ಪ್ರಮಾಣಪತ್ರದಲ್ಲಿ ಅನೇಕ ಮಾಹಿತಿಗಳನ್ನು ಪರೆಮಾಚಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಆಸ್ತಿ ವಿವರವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ೨೦೧೭ರಲ್ಲೇ ಮದುವೆಯಾಗಿದ್ದರೂ ಆ ಮಾಹಿತಿಯನ್ನೂ ನೀಡಿಲ್ಲ ಎಂದು ಹರೀಶ್ ರಿಟ್ ಅರ್ಜಿಯಲ್ಲಿ ಹೇಳಿದ್ದರು.