BengaluruCrime

ಕಡಿಮೆ ಬೆಲೆ ಸೈಟ್‌ ಕೊಡಿಸುವ ಆಮಿಷ; ಸಿನಿಮಾ ನಿರ್ಮಾಪಕ ಅರೆಸ್ಟ್‌

ಬೆಂಗಳೂರು; ಸಿನಿಮಾಗೆ ಬಂಡವಾಳ ಹೂಡಿ, ನಷ್ಟ ಅನುಭವಿಸಿದ್ದ ಚಿತ್ರ ನಿರ್ಮಾಪಕನೊಬ್ಬ ಪೊಲೀಸ್‌ ಅತಿಥಿಯಾಗಿದ್ದಾನೆ. ಅಡ್ಡದಾರಿಯಲ್ಲಿ ಹಣ ಸಂಪಾದನೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ರಿಯಲ್‌ ಎಸ್ಟೇಟ್‌ ಮೂಲಕ ಕಡಿಮೆ ಬೆಲೆಗೆ ಸೈಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪದ ಮೇಲೆ ನಿರ್ಮಾಪಕ ಮಂಜುನಾಥ್‌, ಶಿವಕುಮಾರ್‌, ಗೋಪಾಲ್‌ ಹಾಗೂ ಚಂದ್ರಶೇಖರ್‌ ಎಂಬುವವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಂಜುನಾಥ ನಟ ಕೋಮಲ್ ಅಭಿನಯದ ‘ಲೊಡ್ಡೆ’ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಪ್ರದರ್ಶನ ಕಾಣದ ಹಿನ್ನೆಲೆ ನಷ್ಟ ಅನುಭವಿಸಿದ್ದರು. ಬಳಿಕ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದರು ಎನ್ನಲಾಗಿದೆ.

ಜಾಹೀರಾತು ನೋಡಿ ಮಂಜುನಾಥ್ ರನ್ನ ಸಂಪರ್ಕಿಸಿದ್ದ ಪುಷ್ಪಕುಮಾರ್ ಎಂಬುವವರಿಗೆ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಂಬಿಸಿ, ಯಾರದ್ದೋ ಸೈಟ್ ತೋರಿಸಿ ಹಂತ ಹಂತವಾಗಿ 2 ಲಕ್ಷ ಪಡೆದಿದ್ದರು. ಸೈಟ್​ ಕುರಿತು ಸೂಕ್ತ ದಾಖಲೆಗಳನ್ನ ಪುಷ್ಪಕುಮಾರ್ ಕೇಳಿದಾಗ ಮಂಜುನಾಥ್​ರ ಅಸಲಿ ಬಣ್ಣ ಬಯಲಾಗಿದೆ. ರಾಜಾಜಿನಗರ ಠಾಣೆಗೆ ನೀಡಿದ ದೂರಿನನ್ವಯ ನಿರ್ಮಾಪಕ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share Post