ಪ್ರಶಾಂತ್ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂ. ನಗದು ಪತ್ತೆ; ಕಚೇರಿಯಲ್ಲಿ 2 ಕೋಟಿ ರೂ. ಜಪ್ತಿ
ಬೆಂಗಳೂರು; ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ನಿವಾಸದಲ್ಲಿ ಆರು ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಅವರ ಕಚೇರಿಯಲ್ಲಿ 1.62 ಕೋಟಿ ರೂಪಾಯಿ ನಗದು ಸಿಕ್ಕಿದೆ. ಲಂಚದ ಹಣ ನಲವತ್ತು ಲಕ್ಷ ಸೇರಿದರೆ ಒಟ್ಟು ಎಂಟು ಕೋಟಿ ರೂಪಾಯಿ ವಶಪಡಿಸಿಕೊಂಡಂತಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಕೊಡಿಸಲು ಪ್ರಶಾಂತ್ ಲಂಚ ಕೇಳಿದ್ದರು. ಎಂಬತ್ತು ಲಕ್ಷ ಲಂಚ ಕೇಳಿದ್ದು, ಅದ್ರಲ್ಲಿ ನಲವತ್ತು ಲಕ್ಷ ರೂಪಾಯಿ ಮುಂಗಡ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಅವರನ್ನು ವಶಕ್ಕೆ ಪಡೆದಿದ್ದರು. ಅನಂತರ ಕಚೇರಿಯಲ್ಲಿ ಇಟ್ಟಿದ್ದ 1.62 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಯಿತು. ಇದೇ ವೇಳೆ ಡಾಲರ್ಸ್ ಕಾಲೋನಿಯ ಪ್ರಶಾಂತ್ ಮನೆಯಲ್ಲಿ ಕೂಡಾ ಶೋಧಕಾರ್ಯ ನಡೆಸಲಾಯ್ತು. ಈ ವೇಳೆ ಮನೆಯಲ್ಲಿ 6 ಕೋಟಿ ರೂಪಾಯಿ ನಗದು ಸಿಕ್ಕಿದೆ.