PUNEETH RAJKUMAR; ವಿದ್ಯಾರ್ಥಿ ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು; ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ವಿದ್ಯಾರ್ಥಿ ಉಪಗ್ರಹಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ ಎಂದು ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಹಿನ್ನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1.90 ಕೋಟಿ ವೆಚ್ಚದ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಈ ವಿದ್ಯಾರ್ಥಿ ಉಪಗ್ರಹಕ್ಕೆ ನಟ ಪುನೀತ್ ರಾಜಕುಮಾರ್ ಹೆಸರಿಡಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪುನೀತ್ ರಾಜ್‌ಕುಮಾರ್ ಉಪಗ್ರಹವನ್ನು ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ಉಡಾವಣೆ ಮಾಡಲು ತೀರ್ಮಾನಿಸಿದ್ದೇವೆ. ಉಪಗ್ರಹಕ್ಕೆ ಯುವಕರ ಕಣ್ಮಣಿಯಾಗಿದ್ದ ನಟ ಪುನೀತ್ ರಾಜಕುಮಾರ್ ಹೆಸರಿಡಬೇಕು ಎಂಬ ಸಲಹೆ ಬಂದಿತ್ತು. ಹೀಗಾಗಿ, ಅವರ ಹೆಸರಿಡಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.