BengaluruPolitics

ಗಮನ ಸೆಳೆಯುತ್ತಿರುವ ಶಾಸಕರು; ಇವರನ್ನು ನೋಡಿ ಕಲಿಯಬೇಕು..!

ಬೆಂಗಳೂರು; ಈ ಬಾರಿಯ ವಿಧಾನಸಭೆ ಪ್ರವೇಶ ಪಡೆದಿರುವ ಮೂವರು ಶಾಸಕರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇವರ ನಡೆ, ನುಡಿ ಬೇರೆಯವರಿಗೆ ಮಾದರಿಯಾಗುತ್ತಿದೆ. ಈ ಮೂವರ ಸರಳತೆ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತರ ಶಾಸಕರು ಕೂಡಾ ಇವರ ನಡತೆಯನ್ನು ನೋಡಿ ಕುತೂಹಲದಿಂದ ನೋಡುತ್ತಿದ್ದಾರೆ. ಇದು ಇತರ ಶಾಸಕರಲ್ಲೂ ಬದಲಾವಣೆಗೆ ದಾರಿ ಮಾಡಿಕೊಟ್ಟರೆ, ಜನಪ್ರತಿನಿಧಿಗಳಲ್ಲಿನ ಆಡಂಬರ ಕಡಿಮೆಯಾಗಿ ಸರಳತೆ ಕಾಣೋದಕ್ಕೆ ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಉಡುಪಿ ಜಿಲ್ಲೆ ಬೈಂದೂರು ಶಾಸಕ ಗುರುರಾಜ ಘಂಟಿಹೊಳೆ ಹಾಗೂ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್‌ ಈಶ್ವರ್‌ ಹೆಚ್ಚು ಗಮನ ಸೆಳೆಯುತ್ತಿರುವ ಶಾಸಕರು. ಈ ಮೂವರು ತಮ್ಮದೇ ಆದ ಶೈಲಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗುತ್ತಿದ್ದಾರೆ. ಹೀಗಾಗಿ, ಇವರು ಇತರರಿಗೆ ಮಾದರಿ ಎನಿಸುತ್ತಿದ್ದಾರೆ.

ದರ್ಶನ್‌ ಪುಟ್ಟಣ್ಣಯ್ಯ
ಮೇಲುಕೋಟೆಯಿಂದ ಶಾಸರಾಗಿ ಆಯ್ಕೆಯಾಗಿ ಬಂದಿರುವ ದರ್ಶನ್‌ ಪುಟ್ಟಣಯ್ಯ ಅವರು ರೈತ ನಾಯಕ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ. ಅಮೆರಿಕದಲ್ಲಿ ಕಂಪನಿ ನಡೆಸುತ್ತಿದ್ದ ದರ್ಶನ್‌ ಅವರು ತಂದೆಯ ಸಾವಿನ ನಂತರ ಮೇಲುಕೋಟೆಯಲ್ಲಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲ ಚುನಾವಣೆಯಲ್ಲಿ ದರ್ಶನ್‌ ಸೋಲನುಭವಿಸಿದ್ದರು. ಆದ್ರೆ ಈಗ ಕಾಂಗ್ರೆಸ್‌ ಬೆಂಬಲದೊಂದಿಗೆ ದರ್ಶನ್‌ ಪುಟ್ಟಣ್ಣಯ್ಯ ಶಾಸಕರಾಗಿದ್ದಾರೆ. ಅವರು ಅಮೆರಿಕದಲ್ಲಿ ಇದ್ದು ಬಂದಿದ್ದರೂ, ಇಲ್ಲಿ ಅತ್ಯಂತ ಸರಳವಾಗಿದ್ದಾರೆ.
ದರ್ಶನ್‌ ಪುಟ್ಟಣ್ಣಯ್ಯ ಅವರು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ಪಾಂಡವಪುರದಿಂದ ಬೆಂಗಳೂರಿಗೆ ಬರುವಾಗ ಅವರು ರೈಲನ್ನು ಬಳಸಿದರು. ಸಾಮಾನ್ಯ ಬೋಗಿಯನಲ್ಲೇ ಪ್ರಯಾಣ ಮಾಡಿದರು. ನಂತರ ಆಟೋದಲ್ಲಿ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು. ಅದು ಪ್ರಚಾರಕ್ಕಾಗಿ ಅವರು ಹೀಗೆ ಮಾಡಿಲ್ಲ. ದರ್ಶನ್‌ ಪುಟ್ಟಣ್ಣಯ್ಯ ರಾಜಕೀಯಕ್ಕೆ ಬಂದಾಗಿನಿಂದ ಹೀಗೆಯೇ ಸರಳವಾಗಿ ಜೀವನ ಸಾಗಿಸುತ್ತಿದ್ದಾರೆ. ವಿಧಾನಸೌಧಕ್ಕೆ ಕಾಲಿಟ್ಟ ಮೇಲೂ ಅವರು ಸರಳವಾಗಿಯೇ ಇದ್ದು, ಇತರ ಶಾಸಕರ ಗಮನ ಸೆಳೆಯುತ್ತಿದ್ದಾರೆ.

ಗುರುರಾಜ ಘಂಟಿಹೊಳೆ
ಉಡುಪಿ ಜಿಲ್ಲೆ ಬೈಂದೂರಿನಿಂದ ಶಾಸಕರಾಗಿ ಆಯ್ಕೆಯಾಗಿರುವ ಗುರುರಾಜ ಘಂಟಿಹೊಳೆಯವರು ಕೂಡಾ ತುಂಬಾ ಸರಳ ಜೀವಿ. ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಚಪ್ಪಲಿಯನ್ನೇ ಹಾಕಿರಲಿಲ್ಲ. ಶಾಸಕರಾದ ಮೇಲೂ ಇದನ್ನೇ ಮುಂದುವರೆಸಿದ್ದಾರೆ. ವಿಧಾನಸೌಧಕ್ಕೆ ಆಗಮಿಸಿದ್ದ ಗುರುರಾಜ ಘಂಟಿಹೊಳೆ ಅವರು ಬರಿಗಾಲಲ್ಲಿ ಬಂದಿದ್ದರು. ಅವರಿಗೆ ಬರಿಗಾಲ ಸಂತ ಎಂದೇ ಕರೆಯಲಾಗುತ್ತದೆ.

ಪ್ರದೀಪ್‌ ಈಶ್ವರ್‌
ಪ್ರಭಾವಿ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಅವರನ್ನು ಚಿಕ್ಕಬಳ್ಳಾಪುರದಲ್ಲಿ ಸೋಲಿಸೋರೇ ಇರಲಿಲ್ಲ. ಆದ್ರೆ, ನಾಲ್ಕು ವರ್ಷದ ಹಿಂದೆ ಬಸ್‌ ಚಾರ್ಜಿಗೂ ಕಾಸಿಲ್ಲದೆ ಒದ್ದಾಡುತ್ತಿದ್ದ ಪ್ರದೀಪ್‌ ಈಶ್ವರ್‌ ಎಂಬ ಮೆಡಿಕಲ್‌ ಮೇಷ್ಟ್ರು ಸುಧಾಕರ್‌ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಪ್ರಚಾರದ ವೇಳೆ ಹೇಳಿದಂತೆ ಗೆದ್ದ ಮೇಲೆ ದಿನವೂ ಮನೆಮನೆಗೂ ತೆರಳುತ್ತಿದ್ದಾರೆ. ಪ್ರತಿ ಮನೆಗೂ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಆ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಮುಂದಾಗಿದ್ದಾರೆ. ಆಂಧ್ರಪ್ರದೇಶದ ಧರ್ಮಾವರಂ ಶಾಸಕ ಕೇತಿರೆಡ್ಡಿ ಹಲವು ವರ್ಷಗಳಿಂದ ಗುಡ್‌ ಮಾರ್ನಿಂಗ್‌ ಧರ್ಮಾವರಂ ಎಂಬ ಕಾರ್ಯಕ್ರಮ ನಡೆಸುತ್ತಾರೆ. ಅದೇ ಶೈಲಿಯಲ್ಲಿ ಪ್ರದೀಪ್‌ ಈಶ್ವರ್‌ ಗುಡ್‌ ಮಾರ್ನಿಂಗ್‌ ಚಿಕ್ಕಬಳ್ಳಾಪುರ ಕಾರ್ಯಕ್ರಮ ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Share Post