ರಾಜ್ಯಸಭಾ ಚುನಾವಣೆ; ಜೆಡಿಎಸ್ ಅಭ್ಯರ್ಥಿ ನಿವೃತ್ತಿಯಾಗಲ್ಲ; ಕುಮಾರಸ್ವಾಮಿ
ಬೆಂಗಳೂರು; ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಿಂದ ನಿವೃತ್ತರಾಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಈ ಬಗ್ಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿದ ಬಳಿಕವೇ ಕುಪೇಂದ್ರ ರೆಡ್ಡಿ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಈಗ ಕಾಂಗ್ರೆಸ್ ಬೇರೆ ಹೇಳುತ್ತಿದೆ ಎಂದರು.
ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೊದಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಸೋನಿಯಾ ಗಾಂಧಿ ಜತೆ ಚರ್ಚಿಸಿದ್ದರು. ಆದರೆ, ನಾವೇ ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಎಂಬ ಕಾರಣ ನೀಡಿ, ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಜೆಡಿಎಸ್‌ನ 32 ಶಾಸಕರಿದ್ದಾರೆ. ಕಾಂಗ್ರೆಸ್ ಬಳಿ ಇರುವುದು 25 ಹೆಚ್ಚುವರಿ ಮತಗಳು ಮಾತ್ರ. 32 ದೊಡ್ಡದೊ? 25 ದೊಡ್ಡದೊ? 32 ಶಾಸಕರ ಮತಗಳನ್ನು ಹೊಂದಿರುವ ನಾವು ಕಾಂಗ್ರೆಸ್ ಪಕ್ಷ ಹೇಳಿದಂತೆ ನಡೆದುಕೊಳ್ಳಬೇಕೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಈಗಲೂ ಕಾಲ ಮಿಂಚಿಲ್ಲ. ಗುರುವಾರ ಮಧ್ಯಾಹ್ನದವರೆಗೂ ಕಾಲಾವಕಾಶವಿದೆ. ಜೆಡಿಎಸ್‌ನ ಎಲ್ಲ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಲು ಸಿದ್ಧ. ಕಾಂಗ್ರೆಸ್ ತನ್ನ ಎಲ್ಲ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಡಿಸಲಿ ಎಂದು ಹೇಳಿದರು. ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದ ಕಾರಣಕ್ಕಾಗಿ ಈಗ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂಬ ವಾದವನ್ನು ಸಿದ್ದರಾಮಯ್ಯ ಮತ್ತು ಅವರ ಪಕ್ಷದವರು ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ನಾಯಕರ ಒತ್ತಾಸೆಯಂತೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.