Bengaluru

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಳ; ಪ್ರಧಾನಿಗೆ ಡಿಕೆಶಿ ಪತ್ರ

ಬೆಂಗಳೂರು;  ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. 

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಅನಾವರಣಕ್ಕಾಗಿ ನೀವು ನಮ್ಮ ರಾಜ್ಯಕ್ಕೆ ಬರುತ್ತಿದ್ದೀರಿ. ನಿಮ್ಮನ್ನು ಸ್ವಾಗತಿಸುವುದು ನಮ್ಮ ಜವಾಬ್ದಾರಿ.  ಕರ್ನಾಟಕದಲ್ಲಿ ನಾವು ಅಧಿಕಾರದಲ್ಲಿದ್ದಾಗ 14 ಡಿಸೆಂಬರ್ 2013 ರಂದು ವಿಮಾನ ನಿಲ್ದಾಣವನ್ನು ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿದೆವು ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ.  ಇದು ಕರ್ನಾಟಕ ಮತ್ತು ನಾಡಿನ ಜನರು ಇತಿಹಾಸ ಮತ್ತು ಗುರುತನ್ನು ಗುರುತಿಸುವ ಪ್ರಮುಖ ಮೈಲಿಗಲ್ಲು.

ನೀವು ನಮ್ಮ ರಾಜ್ಯಕ್ಕೆ ಬರುವಾಗ ನಿಮ್ಮನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಆದ್ರೆ ನೀವು ರಾಜ್ಯದಲ್ಲಿ ನಡೆಯುತ್ತಿರುವ ಒಂದಷ್ಟು ವಿಚಾರಗಳನ್ನು ಗಮನಿಸಬೇಕಾಗಿದೆ. ಹೀಗಾಗಿ ಈ ಪತ್ರವನ್ನು ಬರೆಯುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಜನಾದೇಶವನ್ನು ಉಲ್ಲಂಘಿಸಿ ಅನೈತಿಕವಾಗಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಆದ್ರೆ ಅಧಿಕಾರ ವಹಿಸಿಕೊಂಡು ಮೂರು ವರ್ಷಗಳಾದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಎಂಬುದರ ಪರ್ಯಾಯ ಪದವೇ ಬಿಜೆಪಿ ಆಗಿದೆ.

ನಲವತ್ತು ಪರ್ಸೆಂಟ್‌ ಕಮೀಷನ್‌ ತೆಗೆದುಕೊಳ್ಳುತ್ತಿರುವುದು ಈಗಾಗಲೇ ಬಟಾಬಯಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣ, ಗುತ್ತಿಗೆದಾರರಿಂದ ಕಮೀಷನ್‌ ಪಡೆಯುತ್ತಿರುವುದು ಸೇರಿದಂತೆ ಹಲವಾರು ಹಗರಣಗಳ ಆರೋಪ ಸರ್ಕಾರದ ಮೇಲಿದೆ. ನೀವು ನಾ ಕಾವೂಂಗಾ ನಾ ಕಾನೇದೂಂಗಾ ಎಂದು ಹೇಳುತ್ತೀರಿ. ಆದ್ರೆ ಇಲ್ಲಿ ನಡೆಯುತ್ತಿರುವುದೇನು..? ಎಂದು ಡಿ.ಕೆ.ಶಿವಕುಮಾರ್‌ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ.

ನಲವತ್ತು ಪರ್ಸೆಂಟ್‌ ಕಮೀಷನ್‌ ಆರೋಪ ಹೊರಿಸಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಈಗಲೂ ಭ್ರಷ್ಟಾಚಾರ ಮುಂದುವರೆದಿದೆ. ಬಿಜೆಪಿ 2018 ರ ಚುನಾವಣಾ ಪ್ರಣಾಳಿಕೆಯಲ್ಲಿ 600 ಆಶ್ವಾಸನೆಗಳನ್ನು ನೀಡಿತ್ತು. ಆದ್ರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಆ ಶ್ವಾಸನೆಗಳನ್ನು ಈಡೇರಿಸಿಲ್ಲ.  ಶೇಡಕಾ 90 ರಷ್ಟು ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Share Post