Bengaluru

ಕರ್ಫ್ಯೂ ಜಾರಿ, ಹಿಂಪಡೆಯುವಿಕೆ ಬಿಜೆಪಿಯವರ ರಾಜಕೀಯ ನಾಟಕ:ಡಿಕೆಶಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ವೀಕೆಂಡ್‌ ಕರ್ಫ್ಯೂ ವಾಪಸ್‌ ಪಡೆದಿರುವುದನ್ನು ರಾಜಕೀಯ ಗಿಮಿಕ್‌ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಮಾತನಾಡುತ್ತಾ, ‘ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು. ಇದರಿಂದ ಜನರಿಗೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆಯುವವರ, ಮಾರುವವರ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡಿದ್ದೀರಿ.

ಕೆಎಸ್ಆರ್‌ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು, ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಬಡವರು, ಹೊಟೇಲ್ ನವರು, ಚಿತ್ರಮಂದಿರಗಳವರು ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕಂತೆ. ಕುಟುಂಬ ಸದಸ್ಯರು ವಾಹನಗಳಲ್ಲಿ ಸಂಚಾರ ಮಾಡುವಾಗ ಶೇ.50 ರಷ್ಟು ನಿಯಮ ಪಾಲನೆ ಮಾಡಲು ಸಾಧ್ಯವೇ? ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ.

ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ ಈ ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಗಳು ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ? ಎಂದು ಪ್ರಶ್ನಿಸಿದ್ದಾರೆ.

Share Post