Bengaluru

ಅಶ್ವತ್ಥ್ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ. ಶಿವಕುಮಾರ್

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಗುರುವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಅಶ್ವಥ್ ನಾರಾಯಣ್ ಅವರು, ತಾನು ವಿಶ್ವ ಮಾನವ, ಒಕ್ಕಲಿಗ ಎಂದು ಹೇಳಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಶಿವಕುಮಾರ್ ಅವರು, ‘ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದಿದ್ದರು. ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು. ಅವರ ನೇಮಕ ಮಾಡಿದ್ದು ಯಾರು? ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ – ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ?’ ಎಂದು ತಿರುಗೇಟು ನೀಡಿದರು.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ಅಧಿಕಾರಿಗಳು ಮತ್ತೆ ನೊಟಸ್ ಜಾರಿಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪೊಲೀಸ್ ಇಲಾಖೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರು, ವಕ್ತಾರರಿಗೆ ನೊಟೀಸ್ ಜಾರಿ ಮಾಡುತ್ತಿದ್ದಾರೆ. ಈ ನೊಟೀಸ್ ಕೊಡುವ ಮೂಲಕ ಪೊಲೀಸ್ ಅಧಿಕಾರಿಗಳು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಆದರೆ ಅದೇ ನೋಟೀಸ್ ಅನ್ನು ಬಿಜೆಪಿ ನಾಯಕರಿಗೂ ನೀಡಬೇಕಲ್ಲವೇ? ಅವರಿಗೆ ಯಾಕೆ ಕೊಟ್ಟಿಲ್ಲ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದರು.

ಯತ್ನಾಳ್ ಅವರು ಕೆಪಿಎಸ್ ಸಿ ಸದಸ್ಯರು ಹಾಗೂ ಅಧ್ಯಕ್ಷರು ನೇಮಕಕ್ಕೆ ಹಣ ನೀಡಿದ್ದಾರೆ ಎಂದೆಲ್ಲಾ ಹೇಳಿದ್ದಾರೆ. ವಿಶ್ವನಾಥ್ ಅವರು ಟೆಂಡರ್ ನೀಡುವ ಮೊದಲು ಕಮಿಷನ್ ಪರ್ಸೆಂಟೇಜ್ ನಿಗದಿಯಾಗಿದೆ ಎಂದು ಹೇಳಿದ್ದಾರೆ. ಬೇರೆ ನಾಯಕರು ಭ್ರಷ್ಟಚಾರ ಸಂಬಂಧ ಬೇರೆ, ಬೇರೆ ಹೇಳಿಕೆ ನೀಡಿದ್ದು, ಅವರಿಗೂ ನೊಟೀಸ್ ನೀಡಲಿ. ಯತ್ನಾಳ್ ಹಾಗೂ ವಿಶ್ವನಾಥ್ ಅವರು ಹೇಗೆ ವಿಧಾನ ಮಂಡಲದ ಗೌರವಾನ್ವಿತ ಸದಸ್ಯರೋ ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರೂ ಕೂಡ ಸದಸ್ಯರೇ. ಅವರಿಗೆ ನೊಟೀಸ್ ನೀಡದವರು, ಇವರಿಗೆ ಮಾತ್ರ ಯಾಕೆ ನೀಡುತ್ತಿದ್ದಾರೆ? ಎಂದು ಕೇಳಿದರು.

 

Share Post