ಶೇ.5 ಹೆಚ್ಚು ಮತಕ್ಕಾಗಿ ಕಾಂಗ್ರೆಸ್ ಸರ್ಕಸ್; ಕಾಂಗ್ರೆಸ್ ಲೆಕ್ಕಾಚಾರ ಏನು..?
ಬೆಂಗಳೂರು; ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಸಾಕಷ್ಟು ಕಸರತ್ತು ಮಾಡುತ್ತಿದೆ. ಇದರ ಜೊತೆಗೆ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದೆ. ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳೋದಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದು ಸಾಧ್ಯವಾಗಬೇಕಾದರೆ ಕಾಂಗ್ರೆಸ್ ಶೇಕಡಾ 5ರಷ್ಟು ಹೆಚ್ಚುವರಿ ಮತ ಸಿಕ್ಕರೆ ಸಾಕು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ ಎಂದು ಹೇಳಲಾಗುತ್ತಿದೆ.
1994ರ ನಂತರದಿಂದ ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಾ ರಾಜ್ಯದಲ್ಲಿ ಅಧಿಕಾರ ಹಿಡಿಯುವಷ್ಟು ಪ್ರಬಲವಾಗಿ ಬೆಳೆದಿದೆ. ಯಾವಾಗ ಬಿಜೆಪಿ ಪ್ರಬಲವಾಗಿತೋ ಅಂದಿನಿಂದ ಕಾಂಗ್ರೆಸ್ ಪಡೆಯುವ ಶೇಕಡಾವಾರು ಮತಗಳು 35 ಮೀರುತ್ತಿಲ್ಲ. ಬಿಜೆಪಿ ಕೂಡಾ ಕಾಂಗ್ರೆಸ್‌ಗೆ ಸಮನಾಗಿ ಮತ ಪಡೆಯುತ್ತಿದೆ. ಈ ಕಾರಣಕ್ಕಾಗಿ ಎರಡು ದಶಕಗಳಿಂದ ಹೆಚ್ಚಾಗಿ ಅತಂತ್ರ ಪರಿಸ್ಥಿತಿಯೇ ಏರ್ಪಡುತ್ತಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಈ ಬಾರಿ ಬಿಜೆಪಿ ಮತಬ್ಯಾಂಕ್‌ನಿಂದ ಶೇಕಡಾ ಐದರಷ್ಟು ಮತಗಳನ್ನು ಸೆಳೆಯಲು ಮುಂದಾಗಿದೆ.
ಲಿಂಗಾಯತರು ದಶಕಗಳಿಂದ ಬಿಜೆಪಿಯ ಮತಬ್ಯಾಂಕ್ ಆಗಿದ್ದಾರೆ. ಆದ್ರೆ ಈ ಬಾರಿ ಪಂಚಮಸಾಲಿ ಲಿಂಗಾಯತರ ಮೀಸಲಾತಿ ಹೋರಾಟ ಕಾಂಗ್ರೆಸ್‌ಗೆ ವರದಾನವಾಗಿದೆ. ಪಂಚಮಸಾಲಿಗಳ ಮೀಸಲಾತಿ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ. ಹೀಗಾಗಿ, ಕಾಂಗ್ರೆಸ್ ಪಂಚಮಸಾಲಿ ಲಿಂಗಾಯತರು ಸೇರಿದಂತೆ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ ಇದುವರೆಗೆ 165 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಲ್ಲಿ 37 ಮಂದಿ ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ. ಇದರಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಪಂಚಮಸಾಲಿಗಳಾಗಿದ್ದಾರೆ. ಅಂದರೆ ಕಾಂಗ್ರೆಸ್ ಲಿಂಗಾಯತ ಮತಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ ಎಂದು ಹೇಳಬಹುದು. ಇನ್ನು ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಬೇಕಿದೆ. ಇದರಲ್ಲಿ ಐದತ್ತು ಲಿಂಗಾಯತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಪಂಚಮಸಾಲಿಗಳು 2A ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ಆದ್ರೆ ಸರ್ಕಾರ 2A ಮೀಸಲಾತಿ ನೀಡದೆ ಮೀಸಲಾತಿಯನ್ನು ಹೆಚ್ಚಳ ಮಾಡಿ, ಬೇರೊಂದು ಪ್ರವರ್ಗವನ್ನು ಸೃಷ್ಟಿ ಮಾಡಲಾಗಿದೆ. ಇದಕ್ಕೆ ಪಂಚಮಸಾಲಿಗಳ ಒಪ್ಪಿಗೆ ಇಲ್ಲ. ಇದನ್ನೇ ಕಾಂಗ್ರೆಸ್ ಬಂಡವಾಳ ಮಾಡಿಕೊಳ್ಳಲು ಹೊರಟಿದೆ ಎನ್ನಲಾಗಿದೆ.