BengaluruPolitics

ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ; ರಾಜ್ಯದ ಹಲವೆಡೆ ನಡೆಯಿತು ಪ್ರತಿಭಟನೆ

ಬೆಂಗಳೂರು; ಬಿಜೆಪಿ ಎರಡು ಪಟ್ಟಿ ರಿಲೀಸ್‌ ಮಾಡಿದೆ. ಹೊಸಬರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಹೀಗಿರುವಾಗಲೇ ಬಿಜೆಪಿ ಬಂಡಾಯ ಬುಗಿಲೆದ್ದಿದೆ. ಟಿಕೆಟ್‌ ವಂಚಿತರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಟಿಕೆಟ್‌ ವಂಚಿತ ನಾಯಕರ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಬಿಜೆಪಿ ನಾಯಕರಿಗೆ ಮುಜುಗರವನ್ನುಂಟು ಮಾಡಲಾಗಿದೆ.

ಹಾವೇರಿಯಲ್ಲಿ ಹಾಲಿ ಶಾಸಕ ನೆಹರೂ ಓಕಾರ್‌ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಹೀಗಾಗಿ ಅವರು ಅಸಮಾಧಾನಗೊಂಡಿದ್ದಾರೆ. ಈ ಬೆನ್ನಲ್ಲೇ ಅವರ ಬೆಂಬಲಿಗರು ಹಾವೇರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರ ಫೋಟೋ ಹರಿದು ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿರುವ ನೆಹರೂ ಓಲೇಕಾರ್‌ ಅವರು, ಜೆಡಿಎಸ್‌ ಪಕ್ಷದಿಂದ ಆಹ್ವಾನ ಬಂದಿದೆ, ಕಾರ್ಯಕರ್ತರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದಿದ್ದಾರೆ.

ಇನ್ನು ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಿಂದ ಮುನೀಂದ್ರ ಗೌಡ ಅವರು ಬಿಜೆಪಿ ಟಿಕೆಟ್‌ ಬಯಸಿದ್ದರು. ಆದ್ರೆ ಅವರಿಗೆ ಟಿಕೆಟ್‌ ಸಿಕ್ಕಿಲ್ಲ. ಬದಲಾಗಿ ತಮ್ಮೇಶ್‌ ಗೌಡ ಎಂಬುವವರಿಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಮುಣಿಂದ್ರ ಗೌಡ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಸಹಕಾರನಗರದಲ್ಲಿರುವ ಬಿಜೆಪಿ ಕಚೇರಿಗೆ ಅವರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಲಾಗಿದೆ.

ಇನ್ನು ಗದಗದ ಶಿರಹಟ್ಟಿಯಲ್ಲಿ ರಾಮಣ್ಣ ಲಮಾಣಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ಹೀಗಾಗಿ ರಾಮಣ್ಣ ಲಮಾಣಿ ಅವರ ಬೆಂಬಲಿಗರು ಕೂಡಾ ಪ್ರತಿಭಟನೆ ನಡೆಸಿದ್ದಾರೆ. ಗದಗದಲ್ಲಿ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟನೆ ಮಾಡಲಾಗಿದೆ. ಇನ್ನು ಅಥಣಿ ಕ್ಷೇತ್ರದಿಂದ ಟಿಕೆಟ್‌ ಸಿಗದಿದ್ದಕ್ಕೆ ಲಕ್ಷ್ಮಣ ಸವದಿ ಮುನಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಅವರನ್ನು ಸಮಾಧಾನಪಡಿಸಲು ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್‌ ನೆರ್ಜೆ ಅವರು ಆಗಮಿಸಿದ್ದರು. ಅಥಣಿಯಲ್ಲಿನ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಸವದಿ ಬೆಂಬಲಿಗರು ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಘೇರಾವ್‌ ಹಾಕಿದ್ದಾರೆ. ಈ ವೇಳೆ ಸವದಿಯವರು ಮಧ್ಯೆ ಬಂದು ಬೆಂಬಲಗರನ್ನು ಸಮಧಾನಪಡಿಸಿದ್ದಾರೆ.

ಇನ್ನು ನೆಲಮಂಗಲದಲ್ಲೂ ಇದೇ ರೀತಿ ಪ್ರತಿಭಟನೆ ನಡೆದಿದೆ. ಇಲ್ಲಿ ನಾಗರಾಜ್‌ ಅವರು ಟಿಕೆಟ್‌ ಬಯಸಿದ್ದರು. ಆದ್ರೆ ಬಿಜೆಪಿ ವರಿಷ್ಠರು ಸಪ್ತಗಿರಿ ಶಂಕರ್‌ ಅವರಿಗೆ ಟಿಕೆಟ್‌ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್‌ ಬೆಂಬಲಿಗರು ಪ್ರತಿಭಟನೆ ಮಾಡಿ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Share Post