ವಿಪಕ್ಷ ನಾಯಕನ ಸ್ಥಾನ ಬೇಡ ಅಂದರಾ ಕುಮಾರಸ್ವಾಮಿ..?
ಬೆಂಗಳೂರು; ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆಯುತ್ತಿದೆ. ಆದ್ರೆ ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿತ್ತು. ವಿಪಕ್ಷ ನಾಯಕನಿಲ್ಲದೆ ಒಂದು ಅಧಿವೇಶನ ಕೂಡಾ ಮುಗಿದುಹೋಗಿದೆ. ಈಗ ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಚಳಗಾಲದ ಅಧಿವೇಶನ ನಡೆಯಲಿದೆ. ಅದಕ್ಕಿಂತ ಮೊದಲು ವಿಪಕ್ಷ ನಾಯಕನ ಆಯ್ಕೆ ನಡೆಯುತ್ತಾ ಅನ್ನೋದರ ಬಗ್ಗೆ ಕುತೂಹಲ ಶುರುವಾಗಿದೆ. ಅಂದಹಾಗೆ, ಇತ್ತೀಚೆಗಷ್ಟೇ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರು ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಇನ್ನು ನೂತನ ಅಧ್ಯಕ್ಷ ವಿಜಯೇಂದ್ರ ಅವರು, ಇದೇ ಶುಕ್ರವಾರ ಅಂದ್ರೆ ನವೆಂಬರ್ 17ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ.
ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ. ಈ ಸಭೆಗೆ ಬಿಜೆಪಿ ಹೈಕಮಾಂಡ್‌ನಿಂದ ವೀಕ್ಷಕರು ಆಗಮಿಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಭಾಗವಹಿಸಲಿದ್ದಾರೆ. ಇದನ್ನು ಬಿಜೆಪಿ ನೂತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಚಿತಪಡಿಸಿದ್ದಾರೆ. ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯುತ್ತೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಮಾಜಿ ಸಚಿವ ಅಶ್ವತ್ಥನಾರಾಯಣ, ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನಿಲ್ ಕುಮಾರ್ ಅವರು ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹಲವು ಹಿರಿಯರು ಆಕಾಂಕ್ಷಿಗಳಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್ ಯುವ ನಾಯಕ ವಿಜಯೇಂದ್ರಗೆ ಮಣೆ ಹಾಕಿದೆ. ಹೀಗಾಗಿ ಈಗಾಗಲೇ ಬಿಜೆಪಿಯಲ್ಲಿನ ಹಲವರು ಅಸಮಾಧಾನಗೊಂಡಿದ್ದಾರೆ. ಹೀಗಿರುವಾಗಲೇ ವಿಪಕ್ಷ ನಾಯಕನ ಸ್ಥಾನ ಯಾರಿಗೆ ಕೊಡ್ತಾರೆ ಅನ್ನೋ ಕುತೂಹಲ ಅಂತೂ ಇದ್ದೇ ಇದೆ.
ಈಗಾಗಲೇ ಲಿಂಗಾಯತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ವಿಪಕ್ಷ ನಾಯಕನ ಸ್ಥಾನ ನೀಡೋದಿಲ್ಲ. ಒಕ್ಕಲಿಗರಲ್ಲೇ ಯಾರಿಗಾದರೂ ವಿಪಕ್ಷ ನಾಯಕನ ಸ್ತಾನ ಕೊಟ್ಟರೆ ಒಕ್ಕಲಿಗರ ಮತ ಸೆಳೆಯೋದಕ್ಕೆ ಸಾಧ್ಯವಾಗುತ್ತೆ ಅನ್ನೋ ಲೆಕ್ಕಾಚಾರ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ವಿಪಕ್ಷ ನಾಯಕ ಸ್ಥಾನ ಒಕ್ಕಲಿಗರಿಗೆ ನೀಡೋದು ಬಿಜೆಪಿ ಹೈಕಮಾಂಡ್ ಉದ್ದೇಶ. ಹೀಗಾಗಿ, ಆರ್.ಅಶೋಕ್ ಅಥವಾ ಅಶ್ವತ್ಥ್ ನಾರಾಯಣ್‌ಗೆ ಮಣೆ ಹಾಕೋ ಸಾಧ್ಯತೆ ಇದೆ. ಒಂದು ವೇಳೆ ಇವರಿಬ್ಬರಿಗೂ ಕೊಡದೇ ಹೋದರೆ, ಹಿಂದುಳಿದ ವರ್ಗಕ್ಕೆ ಸೇರಿದ ಸುನಿಲ್ ಕುಮಾರ್‌ಗೆ ವಿಪಕ್ಷ ನಾಯಕ ಸ್ಥಾನ ನೀಡಬಹುದು. ಯಾಕಂದ್ರೆ ಹಾಲಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುನಿಲ್ ಕುಮಾರ್ ಕೂಡಾ ಹಿಂದುಳಿದ ಸಮುದಾಯವಾದ ಈಡಿಗ ಬಿಲ್ಲವ ಸಮುದಾಯಕ್ಕೆ ಸೇರಿದವರು. ಹಿಂದುಳಿದ ಸಮುದಾಯಗಳಲ್ಲಿ ಕುರುಬ ಬಿಟ್ಟರೆ ಅತಿಹೆಚ್ಚು ಮತದಾರರಿರೋದು ಈಡಿಗ ಸಮುದಾಯದಲ್ಲಿ. ಹೀಗಾಗಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಈಡಿಗ ಸಮುದಾಯದ ಮತಗಳನ್ನು ಸೆಳೆಯೋದಕ್ಕಾಗಿ ಸುನಿಲ್ ಕುಮಾರ್‌ಗೆ ವಿಪಕ್ಷ ನಾಯಕನ ಸ್ಥಾನ ನೀಡಲೂ ಬಹುದು.
ಹೀಗಾಗಿ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಅಥವಾ ಸುನಿಲ್ ಕುಮಾರ್ ಈ ಮೂವರಲ್ಲಿ ಒಬ್ಬರಿಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಹುತೇಕ ಶುಕ್ರವಾರ ನಡೆಯುವ ಸಭೆಯಲ್ಲಿ ವಿಪಕ್ಷ ನಾಯಕನ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಅಂದಹಾಗೆ, ಈ ಹಿಂದೆ ಬಿಜೆಪಿ ಹೈಕಮಾಂಡ್, ಜೆಡಿಎಸ್‌ನ ಕುಮಾರಸ್ವಾಮಿಯವರಿಗೆ ವಿಪಕ್ಷ ನಾಯಕನ ಸ್ಥಾನ ಬಿಟ್ಟುಕೊಡಲು ಚಿಂತನೆ ನಡೆಸಿತ್ತು. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕುಮಾರಸ್ವಾಮಿಯವರಿಗೆ ವಿಪಕ್ಷ ನಾಯಕನ ಸ್ಥಾನ ಕೊಟ್ಟರೆ, ಒಕ್ಕಲಿಗ ಮತಗಳು ಬಿಜೆಪಿಗೆ ಬರಬಹುದು ಎಂಬ ಲೆಕ್ಕಾಚಾರವಿತ್ತು. ಆದ್ರೆ ಕುಮಾರಸ್ವಾಮಿಯವರು ನನಗೆ ವಿಪಕ್ಷ ನಾಯಕನ ಸ್ಥಾನ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಪಕ್ಷದಲ್ಲೇ ಇರುವವವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಹೀಗಾಗಿ, ಬಿಜೆಪಿ ನಾಯಕರನ್ನೇ ವಿಪಕ್ಷನ ನಾಯಕನ ಸ್ಥಾನದಲ್ಲಿ ಕೂರಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಅವಕಾಶವಿತ್ತು. ಆದ್ರೆ ಅವರಿಗೆ ಅನಾರೋಗ್ಯವಿದೆ. ಜತೆಗೆ ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಸೇರಿದ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ, ಆರ್.ಅಶೋಕ್, ಅಶ್ವತ್ಥನಾರಾಯಣ ಈ ಮೂವರಲ್ಲಿ ಒಬ್ಬರಿಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ. ಹೀಗಾಗಿ ಶುಕ್ರವಾರ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಗ್ಗೆ ಗಮನ ನೆಟ್ಟಿದೆ.