ಹಿರೇಮಗಳೂರು ಕಣ್ಣನ್ ಗೆ ನೀಡಿದ್ದ ನೋಟಿಸ್ ವಾಪಸ್; ರಾಮಲಿಂಗಾರೆಡ್ಡಿ
ಬೆಂಗಳೂರು; ದೇಗುಲದ ಆದಾಯ ಕಡಿಮೆಯಾಗಿರುವ ಕಾರಣಕ್ಕೆ ವೇತನ ವಾಪಸ್ ನೀಡುವಂತೆ ಹಿರೇಮಗಳೂರು ಕಣ್ಣನ್ ಗೆ ನೊಟೀಸ್ ನೀಡಲಾಗಿತ್ತು. ಇದೀಗ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತಿದೆ.
ಬೆಂಗಳೂರಿನಲ್ಲಿ ಮಾತನಾಡಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.
ತಹಸೀಲ್ದಾರ್ ಅವರ ತಪ್ಪು ನಿರ್ಧಾರದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ. ಇಲಾಖೆ ಆಯುಕ್ತರಿಗೆ ಸೂಚನೆ ನೀಡುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ದೇಗುಲದಲ್ಲಿ ಹಿರೇಮಗಳೂರು ಕಣ್ಣನ್ ಪ್ರಧಾನ ಅರ್ಚಕರಾಗಿದ್ದಾರೆ. ಅವರಿಗೆ ಸರ್ಕಾರ ಪ್ರತಿ ತಿಂಗಳು 7500 ರೂಪಾಯಿ ವೇತನ ನೀಡುತ್ತದೆ. ಆದ್ರೆ, ದೇಗುಲದ ಆದಾಯ ಕಡಿಮೆಯಾಗಿರುವುದರಿಂದ ಕಳೆದ ಹತ್ತು ವರ್ಷಗಳ ವೇತನದಲ್ಲಿ ತಿಂಗಳಿಗೆ 4500 ರೂಪಾಯಿಯಂತೆ ವಾಪಸ್ ನೀಡಬೇಕೆಂದು ನೋಟಿಸ್ ನೀಡಲಾಗಿತ್ತು. ಜೊತೆಗೆ ಈ ತಿಂಗಳ ಸಂಬಳವನ್ನು ತಡೆಹಿಡಿಯಲಾಗಿತ್ತು.