2ನೇ ವಾರಕ್ಕೆ ಕಾಲಿಟ್ಟ ವೀಕೆಂಡ್ ಕರ್ಫ್ಯೂ : ಸಿಲಿಕಾನ್ ಸಿಟಿ ಸ್ತಬ್ಧ
ಬೆಂಗಳೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಾರಂತ್ಯ ನಿಷೇಧಾಜ್ಞೆಯನ್ನು ಜಾರಿಮಾಡಲಾಗಿದೆ. ಎರಡನೇ ವಾರವೂ ಕೂಡ ವೀಕೆಂಡ್ ಕರ್ಫ್ಯೂ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೊಲೀಸರು ರಸ್ತೆಗಿಲೀದು ತೆರೆದಿದ್ದ ಅಂಗಡಿ-ಮುಂಗಟ್ಟುಗಳು ಮುಚ್ಚಿಸುವ ಕೆಲಸ ಮಾಡಿದ್ರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ವ್ಯಾಪಾರ-ವಹಿವಾಟು ಜೋರಾಗೆ ಇತ್ತು. ಅಲ್ಲದೆ ಹಬ್ಬಕ್ಕೆ ಊರಿಗೆ ತೆರಳುವವರ ಸಂಖ್ಯೆ ಕೂಡ ಕಡಿಮೆ ಏನಿರಲಿಲ್ಲ. ಕೆಐಎಎಲ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜನ ಜಾತ್ರೆಯಾಗಿತ್ತು.
ಇವೆಲ್ಲದರ ನಡುವೆ ರಾತ್ರಿ 9.30 ಆಗ್ತಿದ್ದಂತೆ ಪೊಲೀಸರು ತಮ್ಮ ಕೆಲಸವನ್ನು ಶುರು ಮಾಡ್ಕೊಂಡ್ರು. ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ರು. ಅನಗತ್ಯವಾಗಿ ಓಡಾಡುವವರಿಗೆ ಫೈನ್ ಹಾಕಿ ಬಿಸಿ ಮುಟ್ಟಿಸಿದ್ರು. ಟಿಕೆಟ್ ತೋರಿಸಿ ಪ್ರಯಾಣ ಮಾಡುವವರಿಗೆ ಮಾತ್ರ ಅನುಮತಿ ನೀಡಿದ್ದು. ಉಳಿದವರಿಗೆ ದಂಡಂ ದಶಗುಣಂ ಪಾಠ ಕಲಿಸಿದ್ರು. ಹೆದ್ದಾರಿಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ತಪಾಸಣೆ ಮಾಡಿದ್ರು. ವಾರಾಂತ್ಯ ನಿಷೇಧ ಗಮನದಲ್ಲಿಟ್ಟುಕೊಂಡು ಕೆಲವರು ಸ್ವತಃ ಅಂಗಡಿ ಬಾಗಿಲು ಮುಚ್ಚಿದ್ರೆ ಇನ್ನೂ ಕೆಲವರು ಪೊಲೀಸರ ಸೂಚನೆ ಮೇರೆಗೆ ಅಂಗಡಿಗಳನ್ನು ಬಂದ್ ಮಾಡಿದ್ರು. ೧೦ ಗಂಟೆ ವೇಳೆಗೆ ಬೆಂಗಳೂರಿನ ರಸ್ತೆಗಳು ಬಿಕೋ ಎನ್ನುವಷ್ಟು ಸ್ತಬ್ದವಾಗಿವೆ.
ಜಿಲ್ಲೆಗಳಲ್ಲೂ ಕೂಡ ವಾರಾಂತ್ಯ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ 144ಸೆಕ್ಷನ್ ಘೋಷಣೆ ಮಾಡಲಾಗಿದೆ. ಎಲ್ಲಾ ಜಿಲ್ಲಾಡಳಿತಗಳೂ ಸರ್ಕಾರದ ನಿಯಮಗಳನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿವೆ. ರಾತ್ರಿ 10ಗಂಟೆ ಬಳಿಕ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.