ರ‍್ಯಾಲಿ, ಪಾದಯಾತ್ರೆಗಳಿಗೆ ಅವಕಾಶ ಬೇಡ; ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಸೂಚನೆ
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಬೇಕು. ರ‍್ಯಾಲಿ, ಪ್ರದರ್ಶನ, ಮೆರವಣಿಗೆ, ಪಾದಯಾತ್ರೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.
ನಾಗೇಂದ್ರ ಎಂಬುವವರು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮೊನ್ನೆಯೇ ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಇಂದೂ ಕೂಡಾ ಅರ್ಜಿಯ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ಕಾಂಗ್ರೆಸ್ ಪಾದಯಾತ್ರೆ ಕುರಿತಂತೆ ಅಫಿಡವಿಟ್ ಸಲ್ಲಿಸಿತು. ಇತ್ತ ಕಾಂಗ್ರೆಸ್ ಪರ ವಕೀಲರು ಕೂಡಾ ಪಾದಯಾತ್ರೆ ನಿಲ್ಲಿಸಿದ್ದೇವೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಈ ವೇಳೆ ನ್ಯಾಯಮೂರ್ತಿಗಳು, ಕೊವಿಡ್ ಹೆಚ್ಚಾಗಿ ಹರಡುತ್ತಿರುವುದರಿಂದ ಜಾರಿಗೆ ತಂದಿರುವ ಕಠಿಣ ನಿಯಮಗಳನ್ನು ಸೂಕ್ತವಾಗಿ ಜಾರಿ ಮಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಕ ಕೈಗೊಳ್ಳಬೇಕು ಎಂದು ಸೂಚಿಸಿತು.