ಮಹಿಳಾ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಎತ್ತಂಗಡಿ..!
ಮಂಗಳೂರು: ಠಾಣೆಯಲ್ಲೇ ಗುಂಡು ಪಾರ್ಟಿ ನಡೆಸಿದ ಆರೋಪ ಹಾಗೂ ಅಶಿಸ್ತು, ಗುಂಪುಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನೂ ಒಟ್ಟಿಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಒಂದು ಠಾಣೆಯಲ್ಲಿ ಈ ಹಿಂದೆ ಇದೇ ರೀತಿ ಎತ್ತಂಗಡಿ ಮಾಡಲಾಗಿತ್ತು. ಇದು ಎರಡನೇ ಘಟನೆಯಾಗಿದೆ.
ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸುಮಾರು 32 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2021ರ ಆಗಸ್ಟ್ 26ರಂದು ಠಾಣೆಯಲ್ಲೇ ಮದ್ಯದ ಪಾರ್ಟಿ ನಡೆಸಿದ್ದರು. ಇದರ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಾದ ನಂತರವೂ ಕರ್ತವ್ಯಲೋಪ ಹಾಗೂ ಗುಂಪುಗಾರಿಕೆ ಹೆಚ್ಚಾಗಿದ್ದರಿಂದ ಎಲ್ಲಾ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ.
ಖಾಲಿಯಾದ ಸ್ಥಾನಗಳಿಗೆ ಈಗ 16 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಉಳಿದ ಸಿಬ್ಬಂದಿಯನ್ನು ತಕ್ಷಣದಲ್ಲೇ ನೇಮಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.