ವಿ ಆರ್ ವಾಕ್ ಫಾರ್ ವಾಟರ್ : ಡಿ.ಕೆ.ಶಿವಕುಮಾರ್ ಆಕ್ರೋಶದ ನುಡಿ
ಬೆಂಗಳೂರು: ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ನಿಯಮಾವಳಿ ಜಾರಿಗೆ ತಂದಿದೆ. ಈಗಾಗಲೇ ವಿಧಿಸಿರುವ ನೈಟ್ ಕರ್ಪ್ಯೂ ಜೊತೆಗೆ ವೀಕೆಂಡ್ ಕರ್ಪ್ಯೂ ಕೂಡ ಜಾರಿ ಮಾಡಿದೆ. ಶನಿವಾರ ಭಾನುವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಿದೆ. ಈ ವೇಳೆ ಜನವರಿ ಒಂಭತ್ತರಂದು ಮೇಕೆದಾಟು ಯೋಜನೆ ಕುರಿತಂತೆ ಪಾದಯಾತ್ರೆ ನಡೆಸಲು ನಿರ್ಧರಿಸಿರುವ ಕೈ ನಾಯಕರಿಗೆ ಪಾದಯಾತ್ರೆ ಕೈ ಬಿಡುವಂತೆ ನೊಟೀಸ್ ನೀಡಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ನಾವು ಯಾವುದೇ ರ್ಯಾಲಿ ಮಾಡೋದಿಲ್ಲ, ಧರಣಿ ನಡೆಸೋದಿಲ್ಲ, ʻಜಸ್ಟ್ ವಿ ಆರ್ ವಾಕ್ ಫಾರ್ ವಾಟರ್ʼ ಎಂದಿದ್ದಾರೆ. ಇವರು ರೂಲ್ಸ್ ಮಾಡಿದ್ದಾರೆ ಅಂತ ರಾಜ್ಯದಲ್ಲಿ ಜನ ಓಡಾಡುವ ಹಾಗಿಲ್ವ. ನಾವು ನೀರಿಗಾಗಿ ನಡೆಯುತ್ತೇವೆ, ಜನರ ದನಿಗಾಗಿ, ರೈತನ ಬದುಕಿಗಾಗಿ, ಬೆಂಗಳೂರಿನ ನಾಗರೀಕರ ಕುಡಿಯುವ ನೀರಿಗಾಗಿ ನಾವು ನಡೆಯುತ್ತೇವೆ ಎಂದಿದ್ದಾರೆ. ಒಳ್ಳೆಯ ಕೆಲಸ ಮಾಡೋದಕ್ಕೆ ಹೊರಟಿರುವ ನಮಗೆ ನೊಟೀಸ್ ನೀಡಿದ್ದಾರಲ್ಲ…ಇವರ ರಾಜಕಾರಣಕ್ಕೆ ನಮ್ಮ ಮೇಲೆ, ಬಡವರು, ವ್ಯಾಪಾರ, ಉದ್ಯಮಿಗಳ ಮೇಲೆ ಗದಾಪ್ರಹೃ ಮಾಡ್ತಿದಾರೆ. ಅವರಿಗೆ ಜನರ ಪ್ರಾಣ ಮುಖ್ಯ ಅಲ್ಲ, ಅವರ ಪಕ್ಷ ಮುಖ್ಯ ಎಂದು ಕಿಡಿ ಕಾರಿದ್ದಾರೆ.
ನಮ್ಮ ಶಾಸಕರು, ಸಚಿವರ ಮೇಲೆ ಕೇಸ್ ದಾಖಲು ಮಾಡೋದಾರೆ ಮೊದಲು ಅವರ ನಾಯಕರ ಮೇಲೆ ಕೇಸ್ ರಿಜಿಸ್ಟರ್ ಮಾಡಲಿ. ಯಾಕಂದ್ರೆ ಮೊದಲ ಕೊರೊನಾ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್ಗೆ ಸಚಿವ ಸುಧಾಕರ್ ಇಳಿದಿದ್ರಲ್ಲ ಅವರ ಮೇಲೆ ಕೇಸ್ ಹಾಕಿ. ಮದುವೆ ಸಮಾರಂಭಗಳಿಗೆ ಹೋಗಿದ್ರಲ್ಲ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ಮೇಲೆ ಹಾಕಿ. ಅಷ್ಟೇ ಯಾಕೆ ಈಗ ದೇಶದ ಹಲವೆಡೆ ಸಂಚರಿಸಿ ಮೋದಿ ಕಾರ್ಯಕ್ರಮ ಮಾಡ್ತದಾರಲ್ಲ ಪ್ರಧಾನಿ ಮೇಲೆ ಕೂಡ ಕೇಸ್ ದಾಖಲು ಮಾಡಿ ಎಂದು ಪ್ರಶ್ನಿಸಿದ್ದಾರೆ. ನಿಷೇಧಾಜ್ಞೆ ಹೆಸರಲ್ಲಿ ಬಡವರೊ ಕೊಲೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.