ಸಂಸದ ಉಮೇಶ್ ಜಾದವ್ ಮೇಲೆ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕಲ್ಬುರ್ಗಿ : ಸಂಸದ ಉಮೇಶ್ ಜಾದವ್ ಅವರು ಪಿಡಿಓ ಅವರನ್ನು ಹೆದರಿಸಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಗುತ್ತಿಗೆದಾರರ ಸಂಘ 40% ಸರ್ಕಾರದ ಬಗ್ಗೆ ಮಾತನಾಡುತ್ತಿದಾರೆ. ಆದರೆ ಕಲ್ಬುರ್ಗಿ ಜಿಲ್ಲೆಯಲ್ಲಿ 40% ಅನ್ನೂ ಮೀರಿ ವಸೂಲಿ ನಡೆದಿದೆ.
ಕೆಲವು ಗ್ರಾಮ ಪಂಚಾಯ್ತಿ ಸದಸ್ಯರು ಉದ್ಯೋಗ ಖಾತ್ರಿಯಲ್ಲಿ ಆಗದ ಕೆಲಸಕ್ಕೆ ಸಂಸದರ ನೆರವಿನಿಂದ ಬಿಲ್ ಮಾಡಿಸಿಕೊಂಡಿದ್ದಾರೆ. ಬಿಲ್ ಹಾಕಿಸಿಕೊಳ್ಳುವುದಕ್ಕಾಗಿ ಚಿತ್ತಾಪುರ ತಾಲೂಕಿನ ಬಿಳಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿರುವ ವೀಡಿಯೋ ಇದೆ. ನನ್ನ ಕ್ಷೇತ್ರದ್ದು ಎನ್ನುವ ಕಾರಣಕ್ಕೆ ವೀಡಿಯೋವನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.
ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕ್ ಖರ್ಗೆ, ನಾನು ಖರ್ಗೆ ಬ್ಯಾನರ್ ಇಂದ ಬಂದಿದ್ದರೂ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ನಾನು ಮೊದಲು ಸಂಘಟನೆಯಿಂದ ಬಂದಿದ್ದೇನೆ ಎಂದರು. ಉಮೇಶ್ ಜಾಧವ್ ನೀವ್ ಯಾವ ಬ್ಯಾನರ್ ಎಂದು ನೆನೆಪಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.