National

ರಣರಂಗವಾದ ಕಂಠಿ ಪಟ್ಟಣ: ಪೊಲೀಸ್‌ ಬಿಗಿ ಭದ್ರತೆ

ಪಶ್ಚಿಮ ಬಂಗಾಳ:  ಸುಭೇಂದು ಅಧಿಕಾರಿಗಳ ಸಭೆಗೂ ಮುನ್ನ ಪೂರ್ವ ಮಿಡ್ನಾಪುರ ಜಿಲ್ಲೆಯ ಕಂಠಿ ಪಟ್ಟಣ ರಣರಂಗವಾಯಿತು. ತೃಣಮೂಲ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗಲಭೆಗೆ ಕಾರಣವಾಯಿತು. ತಕ್ಷಣವೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದ್ರು.

ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನಂದ್ರೆ, ಕಂಠಿ ಪಟ್ಟಣದ ಜುನ್‌ಪುಟ್ ಜಂಕ್ಷನ್ ಬಳಿ ಹಲವರು ಸ್ಥಳೀಯ ಕಾರ್ಯಕರ್ತರು ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ಆಗ ತೃಣಮೂಲ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಸುದ್ದಿ ತಿಳಿದು ಸುಭೇಂದು ಅಧಿಕಾರಿ ಸಹೋದರ ಹಾಗೂ ತಮ್ಲುಕು ಸಂಸದ ದಿವ್ಯೇಂದು ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ದಿವ್ಯೇಂದು ಬಾಬು ಜೊತೆ ಸಿಆರ್‌ಪಿಎಫ್‌ ಪಡೆ ಇದ್ದವು ಎಂದು ತಿಳಿಸಲಾಗಿದೆ.

ಕಾರಿನಿಂದ ಇಳಿದ ಕೂಡಲೇ ಸ್ಥಳೀಯ ಕಾರ್ಯಕರ್ತರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಹಲವಾರು ಕಾರ್ಯಕರ್ತರು ರಕ್ತಸಿಕ್ತವಾಗಿ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೂಡಲೇ ಎಲ್ಲರನ್ನು ಕಂಠಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

Share Post