ರಾಜೀವ್ ಗಾಂಧಿ ಕೊಲೆಗಾರ್ತಿ ನಳಿನಿ ಶ್ರೀಹರನ್ ಪೆರೋಲ್ ಮೇಲೆ ಬಿಡುಗಡೆ
ಚೆನ್ನೈ: ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿಸಿ ಶ್ರೀಹರನ್ ಇಂದು ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ. ನಳಿನಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಮಗಳನ್ನು ನೋಡಬೇಕೆಂದು ನಳಿನಿ ತಾಯಿ ಪದ್ಮಾ ಪದೇ ಪದೇ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ನಳಿನಿಗೆ ಒಂದು ತಿಂಗಳ ಪೆರೋಲ್ ನೀಡಿದೆ.
ತಮಿಳುನಾಡು ಸರ್ಕಾರದಿಂದ ಗುರುವಾರ ಅನುಮತಿ ಪಡೆದಿರುವ ನಳಿನಿ, ಶ್ಯೂರಿಟಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಇಂದು ಬಿಡುಗಡೆ ಆಗಲಿದ್ದಾರೆ. 1991ರ ಮೇ 21ರಂದು ತಮಿಳುನಾಡಿನಲ್ಲಿ ಚುನಾವಣೆ ರ್ಯಾಲಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಗಮಿಸಿದ್ದರು. ಈ ವೇಳೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಒಟ್ಟು 14 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ನಳಿನಿ, ಅವರ ಪತಿ ಮುರುಗನ್ ಸೇರಿ ಒಟ್ಟು ಏಳು ಮಂದಿಯನ್ನ ಕೋರ್ಟ್ ಅಪರಾಧಿಗಳು ಎಂದು ಘೋಷಿಸಿತ್ತು.
ಏಳೂ ಅಪರಾಧಿಗಳಿಗೂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ನಂತರದ ದಿನಗಳಲ್ಲಿ ಎಲ್ಲರಿಗೂ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ. ಸದ್ಯಕ್ಕೆ ನಳಿನಿ ಶ್ರೀಹರನ್ ವೆಲ್ಲೂರಿನ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂದು ಬಿಡುಗಡೆಯಾಗಲಿರುವ ನಳಿನಿ, ಒಂದು ತಿಂಗಳ ನಂತರ ಮತ್ತೆ ಜೈಲಿಗೆ ಮರಳಲಿದ್ದಾರೆ.