Politics

ಮತಾಂತರ ನಿಷೇಧ ಕಾಯ್ದೆ ಗದ್ದಲ; ಸ್ಪೀಕರ್‌ ಕಚೇರಿಯಲ್ಲಿ ಸಭೆ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕಿಚ್ಚು ಜೋರಾಗಿದೆ. ೨೦೧೬ರಲ್ಲೇ ಸಿದ್ದರಾಮಯ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿತ್ತು. ಕಾನೂನು ಆಯೋಗಕ್ಕೆ ಸಿದ್ದರಾಮಯ್ಯ ಅವರೇ ಸೂಚನೆ ನೀಡಿದ್ದರು. ಕಾನೂನು ಆಯೋಗ ಸಿದ್ದಪಡಿಸಿದ್ದ ಮತಾಂತರ ನಿಷೇಧ ಕಾಯ್ದೆಗೆ ಅಂದಿನ ಕಾನೂನು ಸಚಿವರು ಒಪ್ಪಿಗೆ ಕೂಡಾ ಕೊಟ್ಟಿದ್ದರು. ಸಿದ್ದರಾಮಯ್ಯ ಅವರು ಕೂಡಾ ಕರಡು ಪ್ರತಿಗೆ ಸಹಿ ಹಾಕಿದ್ದರು ಎಂದು ಬಿಜೆಪಿ ಸಚಿವರಾದ ಮಾಧುಸ್ವಾಮಿ, ಈಶ್ವರಪ್ಪ ಹಾಗೂ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಆದರೆ ಇದನ್ನು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ದಾಖಲೆಗಳನ್ನು ತೋರಿಸಿ ಎಂದು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಕೋಲಾಹಲ ಉಂಟಾಯಿತು. ಹೀಗಾಗಿ ಕೆಲಕಾಲ ಸದನವನ್ನು ಮುಂದೂಡಲಾಯಿತು. ಸ್ಪೀಕರ್‌ ಕಚೇರಿಯಲ್ಲಿ ಈ ಬಗ್ಗೆ ಸಭೆ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾಧುಸ್ವಾಮಿ, ಆರ್‌.ಅಶೋಕ್‌, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ. ೨೦೧೬ರಲ್ಲಿ ರೂಪಿಸಲಾದ ಕಡತಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಅಂದಿನ ಕಾನೂನು ಸಚಿವರಾಗಿದ್ದ ಜಯಚಂದ್ರ ಅವರಿಗೂ ಬುಲಾವ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

Share Post