Districts

ಸಸಾಲಟ್ಟಿ ಏತನೀರಾವರಿ ಯೋಜನೆಗೆ ಅನುಮೋದನೆ; ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯ ರೂ.266.00 ಕೋಟಿಗಳ ವಿಸ್ತೃತವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಂಗಳಿ ಗ್ರಾಮದ ಬಳಿ ಕೃಷ್ಣ ನದಿಯ ನೀರನ್ನು ಎತ್ತುವಳಿ ಮಾಡಿ ಘಟಪ್ರಭಾ ಎಡದಂಡೆ ಕಾಲುವೆಯ ಬಾಧಿತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಈ ಯೋಜನೆ ರೂಪಿಸಲಾಗಿದೆ.

ಹಳಂಗಳಿ ಗ್ರಾಮದ ಬಳಿ ಕೃಷ್ಣ ನದಿಯ ನೀರನ್ನು ಎತ್ತುವಳಿಯ ಮೂಲಕ ಈ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಈ ಮೂಲಕ 19128.50 ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತದೆ. ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗಲಗಲಿ ಗ್ರಾಮದ ಬಳಿ ಕೃಷ್ಣ ನದಿಯ ನೀರನ್ನು ಎತ್ತುವಳಿ ಮಾಡುವ ಮೂಲಕ ಬೀಳಗಿ ಶಾಖಾ ಕಾಲುವೆ ಮತ್ತು ದಕ್ಷಿಣ ಶಾಖಾ ಕಾಲುವೆ ಸೇರಿದಂತೆ ಘಟಪ್ರಭಾ ಎಡದಂಡೆ ಕಾಲುವೆ ಈ ಬಾಧಿತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಗೂ ಅನುಮೋದನೆ ನೀಡಲಾಯಿತು. 228 ಕೋಟಿ ರೂಪಾಯಿ ವೆಚ್ಚದ ಮಂಟೂರು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅಸ್ತು ಎಂದಿದೆ.

ಘಟಪ್ರಭಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ವಿಶೇಷವಾಗಿ ಹಿಂಗಾರು ಹಂಗಾಮಿನಲ್ಲಿ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ವಿಳಂಬವಾದ ಮಾರುತಗಳಿಂದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆಯ ಕೊರತೆಯಿಂದಾಗಿ ನೀರಾವರಿ ಸೌಲಭ್ಯ ಬಾಧಿತವಾಗಿದೆ. ಹಿರಣ್ಯಕೇಶಿ ನದಿಯಲ್ಲಿ ಒಳ ಹರಿವು ಸಾಮಾನ್ಯವಾಗಿಲ್ಲದೇ ಅಡೆತಡೆಯಿಂದ ಕೂಡಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಹಿಂಗಾರಿ ಹಂಗಾಮಿನಲ್ಲಿ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡುವ ವ್ಯವಸ್ಥೆಯು ಧೂಪದಾಳ ಅಣೆಕಟ್ಟೆಯ ಮೇಲೆ ಅವಲಂಭಿತವಾಗಿದೆ. ಆದರೆ ಅಲ್ಲಿ ನೀರಿನ ಹರಿವು ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇರುವುದರಿಂದ 44566.41 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕೊರತೆ ಉಂಟಾಗಿದೆ.

 

Share Post