ರಸ್ತೆಗಳು ಹೇಮಾಮಾಲಿನಿ ಕೆನ್ನೆ ತರಾ ಇವೆಯಂತೆ: ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಸಚಿವನ ಹೇಳಿಕೆ
ಮುಂಬೈ: ಸವಾಲಿನ ಹೇಳಿಕೆ ನೀಡುವ ಭರದಲ್ಲಿ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಸಿ ಮಹಾರಾಷ್ಟ್ರದ ಸಚಿವ ಹಾಗೂ ಶಿವಸೇನೆ ನಾಯಕ ಗುಲಾಬ್ ರಾವ್ ಪಾಟೀಲ್ ವಿವಾದಕ್ಕೀಡಾಗಿದ್ದಾರೆ. ಶಾಸಕ ಏಕನಾಥ್ ಖಾಡ್ಸೆ ಅವರು ಸಚಿವರ ಕಾರ್ಯವೈಖರಿ ಹಾಗೂ ರಸ್ತೆಗಳ ಅಭಿವೃದ್ಧಿಗೆ ಬಗ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಗುಲಾಬ್ ರಾವ್ ಪಾಟೀಲ್, ರಸ್ತೆಗಳು ಹೇಮಾಮಾಲಿನಿ ಕೆನ್ನೆಯಂತಿವೆ ಎಂದಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ.
30 ವರ್ಷಗಳಿಂದ ಶಾಸಕರಾಗಿರುವ ಏಕನಾಥ್ ಖಾಡ್ಸೆ, ಕ್ಷೇತ್ರದ ಜಲಗಾಂವ್ ಜಿಲ್ಲೆಯಲ್ಲಿರುವ ನನ್ನ ಮನೆ ಕಡೆಗೆ ಬಂದು ನೋಡಲಿ, ರಸ್ತೆಗಳು ಹೇಮಾ ಮಾಲಿನಿಯ ಕೆನ್ನೆಯಂತಿಲ್ಲದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಗುಲಾಬ್ ಪಾಟೀಲ್ ಸವಾಲು ಹಾಕಿದ್ದಾರೆ. ಇದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವರ ಹೇಳಿಕೆ ವಿವಾದಕ್ಕೀಡಾದರೂ, ಶಿವಸೇನಾ ನಾಯಕರು ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, ಈ ರೀತಿಯ ಹೋಲಿಕೆ ಈ ಹಿಂದೆಯೂ ನಡೆದಿತ್ತು. ಇದು ಹೇಮಾ ಮಾಲಿನಿಯವರಿಗೆ ಸಂದ ಗೌರವ ಎಂದು ಹೇಳಿದ್ದಾರೆ. ಇನ್ನು ಸಂಸದೆ ಹೇಮಾಮಾಲಿನಿ ಕೂಡಾ ಸಚಿವರ ಹೇಳಿಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇಂತಹ ಹೇಳಿಕೆಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ದಶಕಗಳ ಹಿಂದೆಯೇ ಲಾಲೂ ಪ್ರಸಾದ್ ಯಾದವ್ ಇಂತಹ ಟ್ರೆಂಡ್ ಸೃಷ್ಟಿ ಮಾಡಿದ್ದರು. ಈಗಲೂ ಇಂತಹ ಪ್ರವೃತ್ತಿಯನ್ನು ಕೆಲವರು ಮುಂದುವರೆಸಿದ್ದಾರೆ. ಇಂತಹ ಕಮೆಂಟ್‌ಗಳು ಒಳ್ಳೆಯದ್ದಲ್ಲ ಎಂದು ಹೇಮಾಮಾಲಿನಿ ಹೇಳಿದ್ದಾರೆ.