ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು -ನಟ ನೆನಪಿರಲಿ ಪ್ರೇಮ್
ಹುಬ್ಬಳ್ಳಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು ಎಂದು ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ.
ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಂಡಾಟಿಕೆಯಿಂದ ದೇಶದಲ್ಲಿ ಎಂಇಎಸ್ ಗೆ ಒಳ್ಳೆಯ ಹೆಸರು ಬರಲ್ಲ, ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಭಾಂದವ್ಯದಿಂದ ಇದ್ದಾರೆ. ಆ ಭಾಂದವ್ಯವನ್ನು ಹಾಳು ಮಾಡಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಕ್ಕೂ ಅವಕಾಶ ನೀಡಲಾಗಿದೆ. ಎಂಇಎಸ್ ಅವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಕಿಡಿಕಾರಿದರು.
ಇತ್ತ ವಾಟಾಳ್ ನಾಗರಾಜು ಅವರು ಕೂಡ ಎಂಇಎಸ್ ಸಂಘಟನೆ ಬ್ಯಾನ್ ಕುರಿತು ಬುಧವಾರ ಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಬುಧವಾರ ಸಭೆ ಕರೆಯುವ ವಿಚಾರ ಪ್ರಸ್ತಾಪಿಸಿದ್ದಾರೆ.