ಕಿಮ್ ಜಾಂಗ್ ಉನ್ ಆಡಳಿತಕ್ಕೆ ಹತ್ತು ವರ್ಷ: ಹೇಗಿದೆ ಉತ್ತರ ಕೊರಿಯಾ..?
ಹತ್ತು ವರ್ಷದ ಕೆಳಗೆ, ಯಾವುದೇ ಪರೀಕ್ಷೆಗೊಳಪಡದೇ 27 ವರ್ಷದ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡರು. ಆ ಸಮಯದಲ್ಲಿ ಪ್ರಪಂಚದಾದ್ಯಂತ ಮಾಧ್ಯಮಗಳಲ್ಲಿ ಕಿಮ್ ಜಾಂಗ್ ಉನ್ ಬಗ್ಗೆ ಬಂದ ವರದಿಗಳು ಬೇರೆ ಯಾವ ನಾಯಕನ ಬಗ್ಗೆಯೂ ಬಂದಿರಲಿಲ್ಲ. ಹಾಗಾದರೆ ಕಳೆದ ಹತ್ತು ವರ್ಷಗಳಲ್ಲಿ ಕಿಮ್ ಜಾಂಗ್ ಉನ್ ಆಡಳಿತ ಹೇಗಿತ್ತು..? ಉತ್ತರ ಕೊರಿಯಾ ಜನರು ಈ ಬಗ್ಗೆ ಏನು ಹೇಳುತ್ತಿದ್ದಾರೆ..? ಅದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ಅದು 2011 ಡಿಸೆಂಬರ್ 19.. ಪ್ಯಾಂಗ್ಯಾಂಗ್ ಬೀದಿಗಳಲ್ಲಿ ರೋದನೆಯೇ ತುಂಬಿಹೋಗಿತ್ತು. ಯೂಮಿಫಾರ್ಮ್ನಲ್ಲಿದ್ದ ವಿದ್ಯಾರ್ಥಿಗಳು ಮೊಣಕಾಲಿನ ಮೇಲೆ ನಿಂತು ಅಳುತ್ತಿದ್ದರು. ಮಹಿಳೆಯರ ಮುಖದಲ್ಲಿ ಹೇಳಿಕೊಳ್ಳಲಾಗದಂತಹ ದುಃಖ. ತಮ್ಮ ಪ್ರೀತಿಯ ನಾಯಕ ಕಿಮ್ ಜಾಂಗ್ ಇಲ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಈ ವಿಡಿಯೋವನ್ನು ಉತ್ತರ ಕೊರಿಯಾ ಸರ್ಕಾರವೇ ಬಿಡುಗಡೆ ಮಾಡಿತ್ತು. 69 ವರ್ಷ ವಯಸ್ಸಿನಲ್ಲಿ ಕಿಮ್ ಜಾಂಗ್ ಇಲ್ ಸಾವನ್ನಪ್ಪಿದ್ದರು.
ಈ ಸಮಯದಲ್ಲಿ ಎಲ್ಲರ ಕಣ್ಣುಗಳೂ ಒಬ್ಬೇ ಒಬ್ಬ ವ್ಯಕ್ತಿಯ ಮೇಲೆ ನೆಟ್ಟಿದ್ದವು. ಪ್ರಪಂಚದಾದ್ಯಂತ ವಿಶ್ಲೇಷಕರೆಲ್ಲರೂ ಕೊರಿಯಾದ ಆ ವ್ಯಕ್ತಿಯ ಬಗ್ಗೆಯೇ ಬರೆಯುವುದಕ್ಕೆ ಆತುರಪಟ್ಟಿದ್ದರು. ಅವರು ಬೇರೆ ಯಾರೂ ಅಲ್ಲ. ಉತ್ತರ ಕೊರಿಯಾದ ಈಗಿನ ಅಧ್ಯಕ್ಷ ಕಿಮ್ ಜಾಂಗ್ ಉನ್..
27 ವರ್ಷ ವಯಸ್ಸಿನಲ್ಲೇ ಉತ್ತರ ಕೊರಿಯಾ ಅಧ್ಯಕ್ಷ ಸ್ಥಾನಕ್ಕೆ ವಾರಸನಾಗಿ ಕಿಮ್ ಜಾಂಗ್ ಉನ್ ಅವತರಿಸುತ್ತಾರೆ. ಆದರೆ, ಅವರು ದೇಶವನ್ನು ಉತ್ತಮವಾಗಿ ಮುನ್ನಡೆಸಬಲ್ಲರು ಎಂದು ಯಾರೂ ನಂಬಲಿಲ್ಲ. ವಯಸ್ಸು ಕಡಿಮೆ ಇದೆ, ಅನುಭವ ಇಲ್ಲವೇ ಇಲ್ಲ. ಅಂತಹ ವ್ಯಕ್ತಿಗೆ ಒಂದು ದೇಶವನ್ನು ಆಳೋ ಅಧಿಕಾರ ಇರುತ್ತೆ ಎಂದು ಯಾರು ಊಹಿಸೋಕೆ ಸಾಧ್ಯ..?
ದೇಶದಲ್ಲಿ ಸೈನಿಕರು ಬಂಡೇಳುತ್ತಾರೆಂದೂ, ಇಲ್ಲವೇ ಉತ್ತರ ಕೊರಿಯಾದ ಶ್ರೀಮಂತ ವರ್ಗಗಳು ಅಧಿಕಾರವನ್ನು ಸ್ವಾಧೀನ ಮಾಡಿಕೊಳ್ಳುತ್ತವೆಂದೂ ಎಲ್ಲರೂ ಭಾವಿಸಿದ್ದರು. ಈ ರೀತಿಯಾಗಿ ಕಿಮ್ಜಾಂಗ್ ಉನ್ ಎಂಬ ಯುವ ನಾಯಕನ ಶಕ್ತಿಯ ಬಗ್ಗೆ ಅವಹೇಳನ ಮಾಡಿದ್ದರು.
ಆದರೆ, ಕಿಮ್ ಜಾಂಗ್ ಉನ್ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. ಅಷ್ಟೇ ಅಲ್ಲ, ಕಿಮ್ ಜಾಂಗ್ ಉನ್ ಇಸಂ ಎಂಬ ಹೊಸ ಶಕೆಗೆ ನಾಂದಿ ಹಾಡಿದರು. ವಿರೋಧಿಗಳನ್ನು ನಿರ್ಮೂಲನೆ ಮಾಡುವ ಕೆಲಸಕ್ಕಿಳಿದ ಕಿಮ್ ಜಾಂಗ್ ಉನ್ ಅದ್ರಲ್ಲಿ ಯಶಸ್ವಿಯಾಗುತ್ತಾರೆ. ನೂರಾರು ಮಂದಿಗೆ ಮರಣಶಿಕ್ಷೆ ಜಾರಿ ಮಾಡುತ್ತಾರೆ. ಆ ಮೂಲಕ ಉತ್ತರ ಕೊರಿಯಾವನ್ನು ತನ್ನ ಮುಷ್ಠಿಯೊಳಗೆ ಬಂಧಿಸಿಬಿಡುತ್ತಾರೆ.
ಅನಂತರ ಕಿಮ್ ಜಾಂಗ್ ಉನ್ ವಿದೇಶಿ ವ್ಯವಹಾರಗಳ ಕಡೆಗೆ ದೃಷ್ಟಿ ನೆಡುತ್ತಾರೆ. ನಾಲ್ಕು ಅಣು ಬಾಂಬ್ ಪರೀಕ್ಷೆಗಳು, 100 ಬಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗಗಳು, ಅಮೆರಿಕ ಅಧ್ಯಕ್ಷರ ಜೊತೆ ಚರ್ಚೆಗಳು ಪ್ರಪಂಚದ ಇತರ ದೇಶಗಳ ದೃಷ್ಟಿಯನ್ನು ಆಕರ್ಷಿಸಿತು. ಅಣು ಬಾಂಬ್ಗಳ ಅಭಿವೃದ್ಧಿಗೆ ಹೆಚ್ಚು ಮಹತ್ವ ಕೊಟ್ಟಿದ್ದು, ಉತ್ತರ ಕೊರಿಯಾಗೆ ಭಾರವಾಗಿ ಹೋಯಿತು. ಈಗ ದೇಶದಲ್ಲಿ ಜನರಿಗೆ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ. ಹತ್ತು ವರ್ಷ ಹಿಂದಿಗಿಂತ ಈಗ ಉತ್ತರ ಕೊರಿಯಾ ಮತ್ತಷ್ಟು ಬಡದೇಶವಾಗಿ ಬದಲಾಗಿದೆ. ಅಷ್ಟೇ ಅಲ್ಲ, ಯಾರ ಬೆಂಬಲವೂ ಇಲ್ಲದೆ ಒಬ್ಬಂಟಿ ದೇಶವಾಗಿ ಉಳಿದುಹೋಗಿದೆ.
ಒಂದು ದಶಕದ ಕಿಮ್ ಜಾಂಗ್ ಉನ್ ಆಡಳಿತದಲ್ಲಿ ಉತ್ತರ ಕೊರಿಯಾ ಏನು ಸಾಧನೆ ಮಾಡಿತು..? ಉತ್ತರ ಕೊರಿಯಾದಿಂದ ದೂರ ಸರಿದವರು ಏನು ಹೇಳುತ್ತಿದ್ದಾರೆ..?
ತಂದೆಯಿಂದ ವಾರಸತ್ವವಾಗಿ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾ ಆಡಳಿತವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ. ಆತ ಹೇಳಿದ್ದೇ ಅಲ್ಲಿ ವೇದವಾಕ್ಯ. ಕಿಮ್ ಹೇಳಿದ್ದನ್ನು ಪಾಲಿಸದಿದ್ದರೆ, ಅವರಿಗೆ ಉಳಿಗಾಲವಿಲ್ಲ. ಸರ್ವಾಧಿಕಾರ ಆಡಳಿತದಿಂಧ ಅಲ್ಲಿನ ಜನ ಬೇಸತ್ತಿದ್ದಾರೆ. ಆದರೂ, ಕಿಮ್ ಕುಟುಂಬದ ಮೇಲಿನ ಭಕ್ತಿಯಿಂದ ಅಲ್ಲಿನ ಈಗಲೂ ಕಿಮ್ ಆಡಳಿತನ್ನು ವಿರೋಧಿಸುತ್ತಿಲ್ಲ. ವಿರೋಧಿಸಬೇಕೆಂಬ ಮನಸ್ಸಿರುವವರೂ ಪ್ರಾಣಭೀತಿಯಿಂದ ಸುಮ್ಮನಿದ್ದಾರೆ.
ಅದರಲ್ಲೂ 2020ರಲ್ಲಿ ಕೊರೊನಾ ಪ್ರಪಂಚವನ್ನು ಆವರಿಸಿದಾಗ ಕಿಮ್ ಜಾಂಗ್ ಉನ್, ಅಜ್ಞಾತ ಸ್ಥಳ ಸೇರಿಕೊಂಡಿದ್ದರು. ಅಷ್ಟೇ ಅಲ್ಲ, ಪಕ್ಕದ ದೇಶಗಳಿಂದ ಆಹಾರ ಸೇರಿ ಯಾವುದನ್ನೂ ಆಮದು ಮಾಡಿಕೊಳ್ಳಲಿಲ್ಲ. ಎಲ್ಲದಕ್ಕೂ ನಿರ್ಬಂಧ ಹೇರಿದರು. ಅದರಲ್ಲೂ ವಾಣಿಜ್ಯ ವಸ್ತುಗಳಿಗಾಗಿ ಉತ್ತರ ಕೊರಿಯಾ ಚೀನಾ ದೇಶವನ್ನೇ ನಂಬಿಕೊಂಡಿದೆ. ಆದರೆ, ಕೊರೊನಾ ಹೆಸರಿನಲ್ಲಿ ಕಿಮ್ ಜಾಂಗ್ ಉನ್, ಚೀನಾದೊಂದಿಗೆ ವ್ಯವಹಾರವನ್ನೇ ನಿಲ್ಲಿಸಿಬಿಟ್ಟಿದೆ. ಇದರಿಂದಾಗಿ, ಉತ್ತರ ಕೊರಿಯಾದಲ್ಲಿ ಸಂಕಷ್ಟಗಳು ಶುರುವಾಗಿವೆ. ಹೀಗಿದ್ದರೂ, ಕಿಮ್ ಜಾಂಗ್ ಉನ್, ತನ್ನ ವಿಚಿತ್ರ ನಡವಳಿಕೆ ಮುಂದುವರೆಸಿದ್ದಾರೆ. ವಿಚಿತ್ರ ತೀರ್ಮಾನಗಳನ್ನು ತೆಗೆದುಕೊಳ್ಳವುದನ್ನು ಮುಂದುವರೆಸಿದ್ದಾರೆ.