History

ಹನುಮ ಜಯಂತಿ ಅಲ್ಲ…ಹನುಮದ್‌ ವ್ರತ..!

ಬೆಂಗಳೂರು: ಡಿಸೆಂಬರ್ 16 ರ ಗುರುವಾರ ಹನುಮದ್ ವ್ರತವನ್ನು ಆಚರಣೆ ಮಾಡಲಾಗುತ್ತದೆ.  ಹನುಮದ್ವ್ರತವನ್ನು ಮಾರ್ಗಶಿರ, ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಕೆಲವರು ತಿಳಿವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ.  ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತ ಆಚರಿಸಲು ಸೂಕ್ತ ಕಾರಣವಿದೆ. ವೇದವ್ಯಾಸರು ಪಾಂಡವರು ದ್ವೈತವನದಲ್ಲಿದ್ದಾಗ ಹನುಮದ್ವ್ರತದ ಕಥೆಯನ್ನು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. ಒಮ್ಮೆ ಹನುಮಂತ ದೇವರು ಸೂರ್ಯನಿಗೆ ರಾಹು ಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕಾ ರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು.

ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, ಅವನು ಚಿರಂಜೀವಿ ಯಾಗುತ್ತಾನೆ ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು ‘ಹನುಮದ್ ವ್ರತ’ವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಇತ್ತಿರುತ್ತಾರೆ.

ಭವಿಷ್ಯೋತ್ತರ ಪುರಾಣದಲ್ಲಿ ಹನುಮದ್ವ್ರತ ಕಥೆ ಹನುಮಂತನ ಅವಕೃಪೆಗೆ ಒಳಗಾದ ಪಾಂಡವರು ವನವಾಸಕ್ಕೆ ಹೋಗಬೇಕಾಯಿತು. ಹಿಂದೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಞೆಯಂತೆ ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು (ಕಲ್ಯಾವೇಶಕ್ಕೊಳಗಾಗಿ), ನಾನು ಆ ಹನುಮಂತನನ್ನು ನನ್ನ ರಥದ ಧ್ವಜಕ್ಕೆ ಕಟ್ಟಿರುವೆ. ಅವನೊಬ್ಬ ಸಾಮಾನ್ಯ ಮಂಗ ಎಂದು ಹೇಳಿ ಆ ದೋರವನ್ನು ಬಿಸಾಕಲು ಹೇಳಿದನು. ಹನುಮಂತ ದೇವರನ್ನು ನೆನೆದರೆ ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು. ಆಗ ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು.

ಹಿಂದೆ ಈ ಹನುಮದ್ ವ್ರತವನ್ನು ಶ್ರೀ ರಾಮಚಂದ್ರನ ಅನುಗ್ರಹದಂತೆ ಹನುಮ ಪ್ರಾರ್ಥನೆಮಾಡಿದ್ದನು. ನಂತರ ದ್ರೌಪದಿ ದೇವಿ ,  ಸುಗ್ರೀವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಾಡಿದ್ದನು. ವಿಭೀಷಣನು ಈ ವ್ರತವನ್ನು ಮಾಡಿ ಲಂಕಾಧಿಪನಾದ ಎಂಬ ಇತಿಹಾಸವಿದೆ.

Share Post