Politics

ವಿಪಕ್ಷ ನಾಯಕನಾಗಲು ಏನೆಲ್ಲಾ ಅರ್ಹತೆ ಇರಬೇಕು..?; ವಿಪಕ್ಷ ನಾಯಕನಿಗೆ ಏನೆಲ್ಲಾ ಸೌಲಭ್ಯ ಇರುತ್ತೆ..?

ಕಳೆದ ಹತ್ತು ವರ್ಷಗಳಿಂದ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವೇ ಇರಲಿಲ್ಲ.. ಈ ಬಾರಿ ಕಾಂಗ್ರೆಸ್‌ ಅಧಿಕೃತ ವಿರೋಧ ಪಕ್ಷದ ಅರ್ಹತೆ ಪಡೆದುಕೊಂಡಿದೆ.. ಹೀಗಾಗಿ ಕಾಂಗ್ರೆಸ್‌ನಿಂದ ಈ ಬಾರಿ ಅಧಿಕೃತ ವಿಪಕ್ಷ ನಾಯಕನ ನೇಮಕ ಮಾಡಬಹುದು.. ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿಯವರೇ ವಿಪಕ್ಷ ನಾಯಕರಾಗಬೇಕೆಂದು ಬಹುತೇಕ ನಾಯಕರು ಒತ್ತಾಯ ಮಾಡಿದ್ದಾರೆ…ರಾಹುಲ್‌ ಗಾಂಧಿ ವಿರೋಧ ಪಕ್ಷ ನಾಯಕನ ಸ್ಥಾನದಲ್ಲಿ ಕೂರೋದು ಬಹುತೇಕ ಪಕ್ಕಾ ಆಗಿದೆ.. ಹಾಗಾದ್ರೆ, ವಿಪಕ್ಷ ನಾಯಕನಾಗಲು ಏನೆಲ್ಲಾ ಅರ್ಹತೆ ಬೇಕು..? ವಿಪಕ್ಷ ನಾಯಕನಾದವನಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಅನ್ನೋದನ್ನ ನೋಡೋಣ..

ಅಧಿಕೃತ ವಿರೋಧ ಪಕ್ಷ, ನಾಯಕ ಆಗೋಕೆ ಅರ್ಹತೆ ಏನು..?;

ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಅರ್ಹತೆ ಹಾಗೂ ವಿರೋಧ ಪಕ್ಷದ ನಾಯಕನ ಅರ್ಹತೆ ಸಿಗಬೇಕಾದರೆ ಆ ಪಕ್ಷಕ್ಕೆ ಲೋಕಸಭೆಯ ಒಟ್ಟು ಸದಸ್ಯರ ಪೈಕಿ ಶೇಕಡಾ ಹತ್ತರಷ್ಟು ಸದಸ್ಯಬಲವಿರಬೇಕು.. ಅಂದರೆ ಲೋಕಸಭಾ ಒಟ್ಟು 543 ಸದಸ್ಯರ ಪೈಕಿ ಕನಿಷ್ಠ 55 ಸ್ಥಾನಗಳನ್ನು ಹೊಂದುವ ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಸಿಗುತ್ತದೆ.. ಆ ಪಕ್ಷದಿಂದ ಅಧಿಕೃತ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ..

ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬೇಕು ಅಂದ್ರೆ 272 ಸದಸ್ಯರ ಸರಳ ಬಹುಮತವಾದರೂ ಬೇಕು.. ಒಂದು ವೇಳೆ ಒಂದೇ ಪಕ್ಷಕ್ಕೆ ಅಷ್ಟು ಸೀಟು ಬರದೇ ಹೋದರೆ ಬೇರೆ ಮಿತ್ರ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆ ಮಾಡಬಹುದು.. ಸದ್ಯ ಲೋಕಸಭೆಯಲ್ಲಿ ಬಿಜೆಪಿ ಪಕ್ಷ 240 ಸ್ಥಾನಗಳನ್ನು ಹೊಂದಿದ್ದು, ಅದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡೋದಕ್ಕೆ ಆಗೋದಿಲ್ಲ.. ಆದ್ರೆ, ಟಿಡಿಪಿ, ಜೆಡಿಯು ಸೇರಿ ಹಲವು ಮಿತ್ರಪಕ್ಷಗಳ ಬೆಂಬಲದೊಂದಿಗೆ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುತ್ತಿದ್ದಾರೆ.. ಆದ್ರೆ, ಮಿತ್ರಪಕ್ಷಗಳ ಬೆಂಬಲದಿಂದ ಅಧಿಕೃತ ವಿರೋಧ ಪಕ್ಷ ಹಾಗೂ ಅಧಿಕೃತ ವಿರೋಧ ಪಕ್ಷದ ನಾಯಕನಾಗೋದಕ್ಕೆ ಸಾಧ್ಯವಿಲ್ಲ.. ಒಂದೇ ಪಕ್ಷದಿಂದ ಶೇಕಡಾ ಹತ್ತರಷ್ಟು ಸಂಸದರು ಆಯ್ಕೆಯಾಗಿರಬೇಕು.. ಆಗ ಮಾತ್ರ ಆ ಪಕ್ಷಕ್ಕೆ ಆ ಮಾನ್ಯತೆ ಸಿಗುತ್ತದೆ.. ಕಳೆದ ಬಾರಿ ಕಾಂಗ್ರೆಸ್‌ ಪಕ್ಷ ಕೇವಲ 52 ಲೋಕಸಭಾ ಸ್ಥಾನಗಳನ್ನು ಗಳಿಸಿತ್ತು.. ಅಧಿಕೃತ ವಿಪಕ್ಷಗಳವಾಗಲು ಇನ್ನೂ ಮೂರು ಸ್ಥಾನ ಬೇಕಿತ್ತು.. ಹೀಗಾಗಿ ಕಳೆದ ಬಾರಿ ಹಾಗೂ 2014ರಲ್ಲಿ ಯಾವುದೇ ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಸಿಕ್ಕಿರಲಿಲ್ಲ.. ಈಗ ಕಾಂಗ್ರೆಸ್‌ 99 ಸ್ಥಾನಗಳಲ್ಲಿ ಗೆದ್ದಿದೆ.. ಹೀಗಾಗಿ, ಕಾಂಗ್ರೆಸ್‌ ಅಧಿಕೃತ ವಿಪಕ್ಷ ಸ್ಥಾನದ ಮಾನ್ಯತೆ ಸಿಕ್ಕಿದೆ..

1969ರವರೆಗೆ ಅಧಿಕೃತ ವಿಪಕ್ಷದ ಪರಿಕಲ್ಪನೆಯೇ ಇರಲಿಲ್ಲ;

ದೇಶದಲ್ಲಿ 1969 ರವರೆಗೆ ವಿರೋಧ ಪಕ್ಷದ ನಾಯಕನಿಗೆ ಅಧಿಕೃತ ಮಾನ್ಯತೆ ಇರಲಿಲ್ಲ.. ಈ ಹುದ್ದೆಗೆ ಯಾವುದೇ ಸ್ಥಾನಮಾನ ಹಾಗೂ ಸವಲತ್ತುಗಳು ಕೂಡಾ ಇರಲಿಲ್ಲ.. ನಂತರ ದಿನಗಳಲ್ಲಿ ಇದಕ್ಕೆ ಅಧಿಕೃತ ಮಾನ್ಯತೆ ನೀಡಲಾಯಿತು.. ಈ ಹುದ್ದೆಗೆ ಈಗ ಕ್ಯಾಬಿನೆಟ್ ಮಂತ್ರಿಯಂತೆಯೇ ಸಂಬಳ ಮತ್ತು ಭತ್ಯೆಗಳೊಂದಿಗೆ ಅಧಿಕೃತ ಮಾನ್ಯತೆಯನ್ನು ನೀಡಲಾಗಿದೆ. ಲೋಕಸಭೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನನ್ನು ನಾಮನಿರ್ದೇಶನ ಮಾಡಲು ಅರ್ಹತೆ ಪಡೆಯಲು ಪಕ್ಷಕ್ಕೆ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಸ್ಥಾನಗಳು 55 ಆಗಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಪಕ್ಷವು 25 ಸ್ಥಾನಗಳನ್ನು ಗೆಲ್ಲಬೇಕು.

ಸಾರ್ವಜನಿಕ ಖಾತೆಗಳು, ಸಾರ್ವಜನಿಕ ಉದ್ಯಮಗಳು ಮತ್ತು ಅಂದಾಜುಗಳಂತಹ ನಿರ್ಣಾಯಕ ಸಮಿತಿಗಳಲ್ಲಿ ವಿರೋಧ ಪಕ್ಷದ ನಾಯಕ ಸದಸ್ಯರಾಗಿರುತ್ತಾರೆ. ವಿವಿಧ ಜಂಟಿ ಸಂಸದೀಯ ಸಮಿತಿಗಳಲ್ಲಿ ಭಾಗವಹಿಸುವ ಅಧಿಕಾರ ಕೂಡಾ ಇರುತ್ತದೆ. ಜಾರಿ ನಿರ್ದೇಶನಾಲಯ (ED) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ನಂತಹ ಕೇಂದ್ರೀಯ ಸಂಸ್ಥೆಗಳ ಮುಖ್ಯಸ್ಥರನ್ನು ನೇಮಕ, ಕೇಂದ್ರೀಯ ಜಾಗೃತ ಆಯೋಗದಂತಹ ಶಾಸನಬದ್ಧ ಸಂಸ್ಥೆಗಳ ಮುಖ್ಯಸ್ಥರು ( CVC) ಮತ್ತು ಕೇಂದ್ರ ಮಾಹಿತಿ ಆಯೋಗ (CIC) ಅಂತಹ ಜವಾಬ್ದಾರಿಯುತ ಆಯ್ಕೆ ಸಮಿತಿಗಳಲ್ಲಿ ಕೂಡಾ ವಿಪಕ್ಷ ನಾಯಕನ ಪಾತ್ರ ಇರುತ್ತದೆ..

 

Share Post