Politics

ಚುನಾವಣೋತ್ತರ ಸಮೀಕ್ಷೆ ಜೂನ್‌ 1ರವರೆಗೆ ಪ್ರಕಟಿಸಬಾರದು ಯಾಕೆ..?

ಕರ್ನಾಟಕದಲ್ಲಿ ಮೇ 7 ರಂದೇ ಲೋಕಸಭಾ ಚುನಾವಣೆ ಮುಗಿದುಹೋಗಿದೆ.. ಏಪ್ರಿಲ್‌ 26ರಂದು 14 ಕ್ಷೇತ್ರಗಳಿಗೆ ಮತದಾನ ನಡೆದರೆ, ಮೇ 7 ರಂದು ಉಳಿದ ಕ್ಷೇತ್ರಗಳಿಗೆ ಮತದಾನ ನಡೆದಿದೆ.. ಆದ್ರೆ, ಇದರ ಫಲಿತಾಂಶಕ್ಕಾಗಿ ಜೂನ್‌ 4ರವರೆಗೂ ಕಾಯಬೇಕು.. ಆದ್ರೆ, ಮತದಾನ ಮುಗಿದ ದಿನದ ಸಂಜೆಯೇ ಚುನಾವಣೋತ್ತರ ಸಮೀಕ್ಷೆಗಳು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದವು.. ಹೆಚ್ಚು ಕಡಿಮೆ ಈ ಸಮೀಕ್ಷೆಗಳ ಮೂಲಕವೇ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂದು ಅಂದಾಜಿಸಬಹುದಾಗಿತ್ತು.. ಆದ್ರೆ, ಈ ಬಾರಿ ರಾಜ್ಯದಲ್ಲಿ ಚುನಾವಣೆ ಮುಗಿದು ಹತ್ತು ದಿನಗಳೇ ಕಳೆದಿವೆ.. ಆದ್ರೆ ಎಲ್ಲೂ ಕೂಡಾ ಸಮೀಕ್ಷೇ ವರದಿಗಳು ಬಂದಿಲ್ಲ.. ಕರ್ನಾಟಕ ಏಕೆ ಚುನಾವಣೆ ಮುಗಿದ ಯಾವ ರಾಜ್ಯದಲ್ಲೂ ಸಮೀಕ್ಷಾ ವರದಿಗಳು ಬಂದಿಲ್ಲ.. ಕಾರಣ ಏನು ಅಂದ್ರೆ, ಜೂನ್‌ 1ನೇ ತಾರೀಖಿನವರೆಗೂ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸುವ ಹಾಗಿಲ್ಲ..

ಯಾಕೆ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಾರದು..?
ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ.. ಏಳನೇ ಹಾಗೂ ಕೊನೆಯ ಹಂತದ ಮತದಾನ ಜೂನ್‌ 1ರಂದು ನಡೆಯಲಿದೆ.. ಹೀಗಾಗಿ ಅದಕ್ಕೂ ಮೊದಲು ಚುನಾವಣೋತ್ತರ ಸಮೀಕ್ಷಾ ವರದಿಗಳನ್ನು ಪ್ರಕಟ ಮಾಡುವಂತಿಲ್ಲ.. ಇದು ಕೇಂದ್ರ ಚುನಾವಣಾ ಆಯೋಗ ಮಾಡಿರುವ ಕಠಿಣ ಆದೇಶ.. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಮತದಾನ ಮುಗಿದಿದೆ.. ಆದ್ರೆ, ಈ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ ಮಾಡಿದರೆ, ಚುನಾವಣೆ ನಡೆಯಬೇಕಿರುವ ಕ್ಷೇತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.. ಈ ಕಾರಣದಿಂದಾಗಿ ಎಲ್ಲಾ ಹಂತದ ಮತದಾನ ಮುಗಿಯುವವರೆಗೂ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸದಂತೆ ನಿಷೇಧ ಹೇರಲಾಗಿದೆ..
ಯಾವಾಗ ಸಮೀಕ್ಷೆ ಪ್ರಕಟಿಸಬಹುದು..?
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126(ಎ)(1)ರ ಪ್ರಕಾರ, ಏಪ್ರಿಲ್ 19 ರಂದು ಬೆಳಿಗ್ಗೆ 7 ಗಂಟೆಯಿಂದ ಜೂನ್ 1ರ ಸಂಜೆ 6.30 ರವರೆಗೆ ಯಾವುದೇ ಎಕ್ಸಿಟ್ ಪೋಲ್‌ಗಳನ್ನು ನೀಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.. ಚುನಾವಣೆಯ ಯಾವುದೇ ಹಂತದ ಮತದಾನದ ನಂತರ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಿದರೆ, ಅದು ನಂತರದ ಹಂತಗಳಲ್ಲಿ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆ ಕಾರಣದಿಂದಲೇ ಕೊನೆಯ ಹಂತದ ಮತದಾನವಾದ ಜೂನ್ 1ರ ಸಂಜೆ 6.30ರವರೆಗೆ ಎಕ್ಸಿಟ್ ಪೋಲ್ ಪ್ರಕಟಿಸಬಾರದು ಎಂದು ನಿರ್ಬಂಧ ಹೇರಲಾಗಿದೆ.

ನಿಷೇಧವನ್ನು ಉಲ್ಲಂಘಿಸಿದರೆ ಏನಾಗುತ್ತದೆ..?
ಚುನಾವಣಾ ಆಯೋಗದ ಈ ನಿಷೇಧವನ್ನು ಉಲ್ಲಂಘಿಸಿ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.. ಅಪರಾಧ ಸಾಬೀತಾದರೆ, ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.. ಹೀಗಾಗಿ ಜೂನ್‌ 1ರ ಸಂಜೆಯವರೆಗೂ ಮಾಧ್ಯಮಗಳು ಕೂಡಾ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಬಾರದು, ಫಲಿತಾಂಶದ ವಿಚಾರವಾಗಿ ವಿಶ್ಲೇಷಣೆಗಳನ್ನೂ ಮಾಡಬಾರದು.. ಜ್ಯೋತಿಷಿಗಳ ನೀಡುವ ಕಲ್ಪಿತ ಭವಿಷ್ಯವನ್ನು ಕೂಡಾ ಪ್ರಕಟಿಸಬಾರದು..

Share Post