ಮತದಾನದ ವೇಳೆ ಹೃದಯಾಘಾತ; ರಾಜ್ಯದಲ್ಲಿ ಮೂವರ ಸಾವು!
ಬೆಂಗಳೂರು; ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.. ಬಿರುಬಿಸಿಲಿನ ಮಧ್ಯೆ ಜನರು ಮತ ಚಲಾಯಿಸುತ್ತಿದ್ದಾರೆ.. ಇದರ ನಡುವೆ ರಾಜ್ಯದ ವಿವಿಧ ಕಡೆ ಕುಸಿದುಬಿದ್ದು ಮೂವರು ಸಾವನ್ನಪ್ಪಿದ್ದಾರೆ.. ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಮತದಾನ ಮಾಡಿದ ನಂತರ ಕುಸಿದುಬಿದ್ದಿದ್ದು, ಸ್ಥಳದಲ್ಲೇ ಇದ್ದ ವೈದ್ಯರೊಬ್ಬರ ಸಮಯಪ್ರಜ್ಞೆಯಿಂದ ಆಕೆ ಬದುಕುಳಿದಿದ್ದಾರೆ..
ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿ ಸಾವು!;
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮೇಗಳ ಗೊಲ್ಲರ ಹಟ್ಟಿಯಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.. 55 ವರ್ಷ ಯಶೋಧಾ ಎಂಬುವವರೇ ಸಾವನ್ನಪ್ಪಿದ ದುರ್ದೈವಿ.. ಚುನಾವಣಾ ಕರ್ತವ್ಯದಲ್ಲಿದ್ದಾಗ APRO ಯಶೋಧಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಯಶೋಧಮ್ಮ ಬೊಮ್ಮಸಮುದ್ರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು ಎಂದು ತಿಳಿದುಬಂದಿದೆ..
ಮತ ಚಲಾಯಿಸಿ ಬಂದು ಸಾವನ್ನಪ್ಪಿದ ವ್ಯಕ್ತಿ!;
ತುಮಕೂರು ನಗರದ ಎಸ್‌ಎಸ್ ಪುರಂನಲ್ಲಿ ವ್ಯಕ್ತಿಯೊಬ್ಬ ಮತ ಹಾಕಿ ಬಂದು ಸಾವನ್ನಪ್ಪಿದ್ದಾರೆ.. 54 ವರ್ಷದ ರಮೇಶ್ ಎಂಬುವವರೇ ಸಾವನ್ನಪ್ಪಿದವರು… ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅವರು, ಇಂದು ಬೆಳಗ್ಗೆ ತುಮಕೂರು ನಗರದ ಎಸ್.ಎಸ್ ಪುರಂನಲ್ಲಿರುವ ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆಯಲ್ಲಿ ಪತ್ನಿ ಜೊತೆ ಮತ ಚಲಾಯಿಸಿದ್ದಾರೆ.. ನಂತರ ಅವರು ಮನೆಗೆ ಬಂದಿದ್ದು, ಮನೆಯಲ್ಲಿ ಕುಸಿದುಬಿದ್ದಿದ್ದಾರೆ.. ತಕ್ಞಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ..
ಮತಗಟ್ಟೆಯಿಂದ ಹೊರಬಂದ ವೃದ್ಧೆ ಸಾವು!;
ಇನ್ನು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಹೊರಬಂದ ವೃದ್ಧೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಪುಟ್ಟಮ್ಮ(90) ಮೃತ ದುರ್ದೈವಿ. ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ.