CrimePolitics

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ; ತುಮಕೂರಲ್ಲಿ ನಡೆದಿದ್ದಾದ್ರೂ ಏನು..?

ತುಮಕೂರು; ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ತುಮಕೂರಿನಲ್ಲಿ ಕಾಂಗ್ರೆಸ್‌ ನಲ್ಲಿ ಕಿತ್ತಾಟ ಶುರುವಾಗಿದೆ.. ಕಾಂಗ್ರೆಸ್‌ನ ಪ್ರಚಾರ  ಸಮಿತ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಎಂಬುವವರ ಮೇಲೆ ಕಾಂಗ್ರೆಸ್‌ನ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ… ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌  ಹಾಗೂ ಅವರ ಸಹಚರರು  ಪ್ರತಿಭಟನೆ ಮಾಡುತ್ತಿದ್ದ ರಾಯಸಂದ್ರ ರವಿಕುಮಾರ್‌ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಪಿಡಬ್ಲ್ಯೂಡಿ ಕಚೇರಿ ಬಳಿ ಪ್ರತಿಭಟನೆ;

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಅವರು, ತುಮಕೂರು ನಗರದ ಪಿಡಬ್ಲೂ​ಡಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದರು.. ಟೆಂಡರ್ ಕರಾರು ಮಾಡಿಕೊಡದ ಇಂಜಿನೀಯರ್ ವಿರುದ್ಧ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಕಳೆದ ರಾತ್ರಿ 10.30ರ ಸುಮಾರಿಗೆ ಸ್ಥಳಕ್ಕೆ ಬಂದ ಗುಬ್ಬಿ ಕಾಂಗ್ರೆಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಹಾಗೂ ಸಹಚರರು ರವಿಕುಮಾರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ನನ್ನನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದರು:

ಹಲ್ಲೆ ಮಾಡಿದ ಮೇಲೆ ಶಾಸಕರು, ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿಸು, ಸುಟ್ಟು ಹಾಕಿಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರಾಯಸಂದ್ರ ರವಿಕುಮಾರ್‌ ಆರೋಪ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ನಂತರ ಶಾಸಕರು ತಮ್ಮ ಕಾರಿನಲ್ಲಿ ನನ್ನನ್ನು ಕಿಡ್ನ್ಯಾಪ್‌ ಮಾಡಲು ಯತ್ನಿಸಿದರು. ನಾನು ತಪ್ಪಿಸಿಕೊಂಡು ಓಡಿ ಬಂದು ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಹೋಗಿ ರಕ್ಷಣೆ ಪಡೆದುಕೊಂಡಿದ್ದೇನೆ. ಇದೇ ವೇಳೆ ಗಲಾಟೆ ಬಿಡಿಸಲು ಬಂದ ಪೊಲೀಸ್‌ ಸಿಬ್ಬಂದಿ ಮೇಲೂ ಹಲ್ಲೆ ಮಾಡಲಾಗಿದೆ ಎಂದು ರಾಯಸಂದ್ರ ರವಿಕುಮಾರ್‌ ಆರೋಪ ಮಾಡಿದ್ದಾರೆ. ಈಗ ರವಿಕುಮಾರ್‌ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಖುರ್ಚಿಗಳು ಚೆಲ್ಲಾಪಿಲ್ಲಿ;

ರವಿಕುಮಾರ್‌ ಪ್ರತಿಭಟನೆ ಮಾಡಿದ ಸ್ಥಳದಲ್ಲಿ ಖುರ್ಚಿಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲಿ ದಾಂದಲೆ ಮಾಡಿರುವುದಕ್ಕೆ ದೃಶ್ಯಗಳ ಸಾಕ್ಷಿಯಾಗಿದೆ. ಈ ಬಗ್ಗೆ ತಿಲಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಇದುವರೆಗೂ ಪ್ರಕರಣ ಸಂಬಂಧ ಯಾರನ್ನೂ ವಶಕ್ಕೆ ಪಡೆದುಕೊಂಡಿಲ್ಲ.

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಒಗ್ಗಟ್ಟು ಪ್ರದರರ್ಶನ ಮಾಡಬೇಕು. ಒಟ್ಟಿಗೆ ಹೋಗಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು. ಆದ್ರೆ ಯಾವುದೋ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಿತ್ತಾಡಿಕೊಂಡಿದ್ದಾರೆ. ಇದು ಪೊಲೀಸ್‌ ಠಾಣೆ ಮೆಟ್ಟಿಲೂ ಏರಿದೆ. ಈ ಗಲಾಟೆ ಇನ್ನೂ ಯಾವ ಮಟ್ಟಕ್ಕೆ ಹೋಗುತ್ತದೋ ನೋಡಬೇಕು.

 

Share Post